More

    ತಡಗವಾಡಿಯಲ್ಲಿ ಗಮನಸೆಳೆದ ಕೃಷಿ ವಸ್ತು ಪ್ರದರ್ಶನ: ಮಣ್ಣಿನ ಸವಕಳಿಯ ಜಾಗೃತಿ ಮೂಡಿಸಿದ ಜಂಟಿ ಕೃಷಿ ನಿರ್ದೇಶಕ

    ಮಂಡ್ಯ: ರೈತರು ಮಣ್ಣಿನ ಸವಕಳಿ ತಪ್ಪಿಸಲು ಜಾಗೃತಿ ವಹಿಸಬೇಕು. ಸೂಕ್ಷ್ಮಾಣು ಜೀವಿಗಳನ್ನು ಬೀಜೋಪಚಾರ ಮಾಡಿ, ಅಗತ್ಯ ಸಾರಜನಕ ಉತ್ಪಾದನೆಗೆ ಒತ್ತು ನೀಡಬೇಕು. ಜತೆಗೆ ಹಸಿರೆಲೆ ಹಾಗೂ ಕೊಟ್ಟಿಗೆ ಗೊಬ್ಬರ ಬಳಕೆಗೆ ಆದ್ಯತೆ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಕಿವಿಮಾತು ಹೇಳಿದರು.
    ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಮದ್ದೂರು ತಾಲೂಕು ಕೆ.ಬಿ.ದೊಡ್ಡಿ ಸಂಪೂರ್ಣ ಅಂತಾರಾಷ್ಟ್ರೀಯ ಕೃಷಿ ಮತ್ತು ತೋಟಗಾರಿಕೆ ತಂತ್ರಜ್ಞಾನ ಸಂಸ್ಥೆ, ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾ.ಪಂ ಸಹಯೋಗದಲ್ಲಿ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
    ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಕೃಷಿ ಪದ್ದತಿಗೆ ಬೆನ್ನು ತೋರಿ ಅತಿಯಾದ ಯೂರಿಯಾ ಹಾಗೂ ನೀರಿನ ಬಳಕೆಯಿಂದ ಮಣ್ಣಿನ ಸವಕಳಿ ಹೆಚ್ಚಾಗಿದೆ. ಇದರ ಪರಿಣಾಮ ಬೆಳೆಯ ಇಳುವರಿ ಪ್ರಮಾಣ ಕುಂಠಿತವಾಗುತ್ತಿದ್ದು, ರೈತರು ಈ ಬಗ್ಗೆ ಜಾಗೃತರಾಗಬೇಕಿದೆ. ಹಣ್ಣು, ತರಕಾರಿ ಹಾಗೂ ಆಹಾರ ಪದಾರ್ಥಗಳಿಗೆ ಅತಿಯಾದ ಔಷಧ ಬಳಕೆಯಾಗಿರುವುದರಿಂದ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ 35 ಕೋಟಿ ಜನಸಂಖ್ಯೆ ಇತ್ತು. ಆಹಾರಕ್ಕಾಗಿ ಅನ್ಯ ದೇಶಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು. ಇದನ್ನು ತೊಡೆದು ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಸಿರು ಕ್ರಾಂತಿ ಯೋಜನೆ ಜಾರಿಗೊಳಿಸಿದ ಪರಿಣಾಮ ಇಂದು ಕೋಟ್ಯಂತರ ಜನರಿಗೆ ಆಹಾರ ಸಮಸ್ಯೆ ಶಮನವಾಗಿದೆ. ಮಾತ್ರವಲ್ಲದೆ ಮುಂದಿನ 2 ವರ್ಷದ ಅವಧಿಗೆ ಅಗತ್ಯವಿರುವ ಆಹಾರ ಪದಾರ್ಥಗಳು ನಮ್ಮಲ್ಲಿ ದಾಸ್ತಾನಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ ಅವರು, ರಾಜ್ಯದಲ್ಲಿ ಕೃಷಿ ಕಾಲೇಜುಗಳು ಹೆಚ್ಚಳವಾಗಿ ಹೊಸ ಪೀಳಿಗೆಗೆ ಕೃಷಿ ಬಗ್ಗೆ ಅರಿವು ಹೆಚ್ಚಾಗಬೇಕು. ಸರ್ಕಾರಿ ಕೃಷಿ ಕಾಲೇಜಿಗೂ ಮಿಗಿಲಾದ ಪೈಪೋಟಿ ನೀಡಿ ಭವಿಷ್ಯದ ಕೃಷಿ ಪದವೀಧರರನ್ನು ಸಜ್ಜುಗೊಳಿಸುತ್ತಿರುವ ಸಂಪೂರ್ಣ ಕೃಷಿ ಕಾಲೇಜಿನ ಕಾರ್ಯವೈಖರಿ ಶ್ಲಾಘನೀಯ ಎಂದರು.
    ಸಂಸ್ಥೆಯ ಉಪಾಧ್ಯಕ್ಷೆ ಡಾ.ಸಂಪೂರ್ಣ ನಾಯ್ದು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಕೃಷಿ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ. ಪ್ರತಿ ಜೀವಿಯ ಪ್ರಾಣ ಉಳಿವಿಗೆ ರೈತರ ಉದಾತ್ತ ಸೇವೆ ನೆರವಾಗಿದೆ. ಅದರಂತೆ ಸಂಕಷ್ಟದಲ್ಲಿರುವ ರೈತರನ್ನು ಉಳಿಸುವ ಕಾಯಕಕ್ಕೆ ನಾವೆಲ್ಲರು ಕೈಜೋಡಿಸಬೇಕಿದೆ ಎಂದರು.
    ಕಾಲೇಜಿನ ಡೀನ್ ಡಾ.ಬಿ.ಎನ್.ಜ್ಞಾನೇಶ್, ಸಹಾಯಕ ಪ್ರಾಧ್ಯಾಪಕಿ ಡಾ.ಸುಧಾ, ತಡಗವಾಡಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ರಘು ಇತರರಿದ್ದರು.
    ಗಮನಸೆಳೆದ ಬೆಳೆ ಕ್ಷೇತ್ರೋತ್ಸವ: ಸಂಪೂರ್ಣ ಕೃಷಿ ವಿದ್ಯಾಸಂಸ್ಥೆಯ 25 ಜನ ಬಿಎಸ್ಸಿ ವಿದ್ಯಾರ್ಥಿಗಳು ಮೂರು ತಿಂಗಳು ತಡಗವಾಡಿಯಲ್ಲಿ ವಾಸ್ತವ್ಯವಿದ್ದು, ಗ್ರಾಮೀಣ ಬದುಕಿನ ಜೀವನ ಶೈಲಿ ಹಾಗೂ ಕೃಷಿ ಪದ್ಧತಿಯ ನೈಜ್ಯತೆ ಅರಿಯುವ ಪ್ರಯತ್ನ ಮಾಡಿದ್ದಾರೆ. ಅ.12ರಂದು ಬೆಳೆ ಕ್ಷೇತ್ರೋತ್ಸವ ಹಾಗೂ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
    ಇನ್ನು ಮೇಳದಲ್ಲಿ ವಿವಿಧ ಸಿರಿಧಾನ್ಯಗಳು, ಔಷಧ ಬೆಳೆಗಳು, ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಮಾತ್ರವಲ್ಲದೆ ವಿಷಮುಕ್ತ ಆಹಾರ ಉತ್ಪಾದನೆಗೆ ಒತ್ತು ನೀಡುವ ಸದುದ್ದೇಶದಿಂದ ತಡಗವಾಡಿ ಗ್ರಾಮದ ರೈತರೊಬ್ಬರ ಅರ್ಧ ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ 9 ಬಗೆಯ ಸಿರಿಧಾನ್ಯ, 7 ಬಗೆಯ ದ್ವಿದಳ ಧಾನ್ಯ, 4 ಬಗೆಯ ಎಣ್ಣೆಕಾಳು, 13 ವಿವಿಧ ತರಕಾರಿಗಳ ಪ್ರಾತ್ಯಕ್ಷಿಕೆ ಜತೆ 17 ಔಷಧ ಸಸ್ಯಗಳ ಮಾಹಿತಿಯನ್ನು ರೈತರು ಹಾಗೂ ಜನಸಾಮಾನ್ಯರಿಗೆ ಕೃಷಿ ವಸ್ತು ಪ್ರದರ್ಶನ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts