More

    ಕೊಹ್ಲಿ ಔಟ್​ ಆದಾಗಲೂ ಸೋಲಿನ ಭಯ ಕಾಡಲಿಲ್ಲ; ಆರ್​ಸಿಬಿ ನಾಯಕ ಪ್ಲೆಸಿಸ್​ ಹೀಗೆ ಹೇಳಿದ್ದೇಕೆ?

    ಬೆಂಗಳೂರು: ಪಂಜಾಬ್​ ಕಿಂಗ್ಸ್​ ತಂಡ 177 ರನ್​ ಸವಾಲಿಗೆ ಪ್ರತಿಯಾಗಿ ಆರ್​ಸಿಬಿ ತಂಡ ಪ್ರಮುಖ ವಿದೇಶಿ ಆಟಗಾರರಾದ ನಾಯಕ ಫಾಫ್​ ಡು ಪ್ಲೆಸಿಸ್​ (3), ಕ್ಯಾಮರಾನ್​ ಗ್ರೀನ್​ (3) ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ (3) ವಿಕೆಟ್​ಗಳನ್ನು ಅಗ್ಗಕ್ಕೆ ಕಳೆದುಕೊಂಡಿತು. ಆದರೂ, ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (77 ರನ್​, 49 ಎಸೆತ, 11 ಬೌಂಡರಿ, 2 ಸಿಕ್ಸರ್​) ಏಕಾಂಗಿ ಹೋರಾಟದಿಂದ ದಿಟ್ಟ ಚೇಸಿಂಗ್​ನತ್ತ ತಂಡವನ್ನು ಮುನ್ನಡೆಸಿದರು. ಆದರೆ 16ನೇ ಓವರ್​ನ ಕೊನೇ ಎಸೆತದಲ್ಲಿ ಕೊಹ್ಲಿ ಔಟಾದರು. ಆಗ ಕೊನೇ 4 ಓವರ್​ಗಳಲ್ಲಿ 47 ರನ್​ ಗಳಿಸುವ ಸವಾಲು ಇತ್ತು. ಕೊಹ್ಲಿ ಔಟಾದ ಆ ಹಂತದಲ್ಲೂ ನಮಗೆ ಸೋಲಿನ ಭಯ ಕಾಡಿರಲಿಲ್ಲ. ಯಾಕೆಂದರೆ ಇಂಪ್ಯಾಕ್ಟ್​ ಪ್ಲೇಯರ್​ ಮಹಿಪಾಲ್​ ಲೊಮ್ರೊರ್​ ಮೇಲೆ ನಂಬಿಕೆ ಇತ್ತು. ಜತೆಗೆ ದಿನೇಶ್​ ಕಾರ್ತಿಕ್​ ಅನುಭವದ ಬಲವಿತ್ತು. ಹೀಗಾಗಿ ಕೊನೇ ಓವರ್​ನಲ್ಲಿ 15 ರನ್​ ಬೇಕಿದ್ದರೂ ಗಳಿಸುವ ವಿಶ್ವಾಸವಿತ್ತು ಎಂದು ಆರ್​ಸಿಬಿ ನಾಯಕ ಪ್ಲೆಸಿಸ್​ 4 ವಿಕೆಟ್​ ಗೆಲುವಿನ ಬಳಿಕ ಹೇಳಿದರು.

    ದಿನೇಶ್​ ಕಾರ್ತಿಕ್​ (28*) ಮತ್ತು ಮಹಿಪಾಲ್​ ಲೊಮ್ರೊರ್​ (17*) ಜೋಡಿ ಮುರಿಯದ 7ನೇ ವಿಕೆಟ್​ಗೆ 18 ಎಸೆತಗಳಲ್ಲೇ 48 ರನ್​ ಸಿಡಿಸಿ 4 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿತು. ಕೊನೇ ಓವರ್​ನಲ್ಲಿ 10 ರನ್​ ಬೇಕಿದ್ದಾಗ ಕಾರ್ತಿಕ್​, ಅರ್ಷದೀಪ್​ರ ಮೊದಲ 2 ಎಸೆತಗಳಲ್ಲೇ ಸಿಕ್ಸರ್​-ಬೌಂಡರಿ ಸಿಡಿಸಿ ಗೆಲ್ಲಿಸಿದರು.

    2 ತಿಂಗಳ ಬಿಡುವಿನ ಬಳಿಕ ಟೂರ್ನಿಯಲ್ಲಿ ಮರಳಿ ಕಣಕ್ಕಿಳಿದಿರುವ ಕೊಹ್ಲಿ ಆಟ ಮಾತ್ರ ಬದಲಾಗಿಲ್ಲ. ವಿರಾಮದಿಂದ ಅವರಿಗೆ ಲಾಭವೇ ಆದಂತಿದೆ ಎಂದು ಪ್ಲೆಸಿಸ್​, ಪಂದ್ಯಶ್ರೇಷ್ಠ ಹಾಗೂ ಮಾಜಿ ನಾಯಕನನ್ನೂ ಹೊಗಳಿದರು.

    ಕೊಹ್ಲಿ ಕ್ಯಾಚ್​ ಬಿಟ್ಟಿದ್ದಕ್ಕೆ ಬೆಲೆ ತೆತ್ತೆವು
    ಆರ್​ಸಿಬಿ ಇನಿಂಗ್ಸ್​ನ 2ನೇ ಎಸೆತದಲ್ಲೇ ಕೊಹ್ಲಿ ಅವರ ಕ್ಯಾಚ್​ಅನ್ನು ಸ್ಲಿಪ್​ನಲ್ಲಿ ಜಾನಿ ಬೇರ್​ಸ್ಟೋ ಕೈಚೆಲ್ಲಿದರು. ಆಗಿನ್ನೂ ಕೊಹ್ಲಿ ಖಾತೆಯನ್ನೂ ತೆರೆದಿರಲಿಲ್ಲ. ಆ ಕ್ಯಾಚ್​ ಕೈಚೆಲ್ಲಿದ್ದಕ್ಕೆ ನಾವು ಸೋಲಿನ ಬೆಲೆ ತೆರಬೇಕಾಯಿತು ಎಂದು ಪಂಜಾಬ್​ ಕಿಂಗ್ಸ್​ ನಾಯಕ ಶಿಖರ್​ ಧವನ್​ ಬೇಸರಿಸಿದರು. “ಆರಂಭಿಕ 6 ಓವರ್​ಗಳಲ್ಲಿ ಹೆಚ್ಚಿನ ರನ್​ ಗಳಿಸಲಿಲ್ಲ. ಇದರಿಂದ 10-15 ರನ್​ ಕೊರತೆ ಅನುಭವಿಸಿದೆವು. ಪಂದ್ಯದ ಕೊನೆಯಲ್ಲಿ ನಾವು ಇನ್ನೂ ಉತ್ತಮವಾಗಿ ಬೌಲಿಂಗ್​ ಮಾಡಬಹುದಿತ್ತು’ ಎಂದು ಧವನ್​ ಹೇಳಿದರು.

    IPL 2024: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ಗೆ ಸತತ 2ನೇ ಜಯ; ಎಡವಿದ ಗುಜರಾತ್​ ಟೈಟಾನ್ಸ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts