More

    ಸೋಂದಾ ಸ್ವರ್ಣವಲ್ಲೀ ಮಠಕ್ಕೆ ನೂತನ ಯತಿಗಳ ಪ್ರವೇಶ

    ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠಕ್ಕೆ ನೂತನ ಯತಿಗಳ ಪ್ರವೇಶವಾಗಿದೆ.

    1200 ವರ್ಷಗಳ ಪರಂಪರೆ ಹೊಂದಿರುವ ಮಠದ 55 ಯತಿಗಳಾಗಿ ಯಲ್ಲಾಪುರದ ಈರಾಪುರ ಗಂಗೇಮನೆಯ ನಾಗರಾಜ ಭಟ್ಟ ಗುರುವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದರು.

    ಗುರುವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಮಠದ ಸಮೀಪದ ಶಾಲ್ಮಲಾ ನದಿ ತೀರದಲ್ಲಿ ಸನ್ಯಾಸ ದೀಕ್ಷಾ ಕಾರ್ಯಗಳು ನಡೆದವು. ಸ್ನಾನ ಮಾಡಿ, ಶಿಕೆಯ ಕೂದಲು, ಜನಿವಾರ, ಸಂಸಾರದ ಸಕಲ ಬಂಧಗಳನ್ನೂ ತೊರೆದು ಸಚ್ಚಿದಾನಂದ ಸ್ವರೂಪಿಯಾಗಿ ಏಳು ಹೆಜ್ಜೆಗಳನ್ನಿಟ್ಟ ಬ್ರಹ್ಮಚಾರಿಗೆ ಮಠದ ಹಿರಿಯ ಶ್ರೀಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಕಾಷಾಯ ವಸ್ತ್ರ, ಬ್ರಹ್ಮ ದಂಡ, ಕಮಂಡಲ, ಪಾದುಕೆ ನೀಡಿ ಪ್ರಣವ ವಾಕ್ಯೋಪದೇಶ ಮಾಡಿದರು. ಈ ಶುಭ ಘಳಿಗೆಗೆ ನಾಡಿನ 10ಕ್ಕೂ ಅಧಿಕ ಯತಿಗಳು ಸಾಕ್ಷಿಯಾಗಿ ಆಶೀರ್ವಾದ ಮಾಡಿದರು.

    ನಂತರ ಪಂಚ ವಾದ್ಯಗಳೊಂದಿಗೆ ನೂತನ ಶ್ರೀಗಳನ್ನು ಮಠಕ್ಕೆ ಕರೆತಂದು, ಶ್ರೀ ಆನಂದ ಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳೆಂದು ನಾಮಕರಣ ಮಾಡಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, 4 ಸಾವಿರದಷ್ಟು ಮಾತೆಯರು ಪೂರ್ಣ ಕುಂಭದೊಂದಿಗೆ ನೂತನ ಯತಿಗಳ್ನುಮಠಕ್ಕೆ ಸ್ವಾಗತಿಸಿದರು. 20 ಸಾವಿರಕ್ಕೂ ಅಧಿಕ ಭಕ್ತರು ಈ ಘಳಿಗೆಗೆ ಸಾಕ್ಷಿಯಾದರು.

    ಮಠದ ಆವಾರದಲ್ಲಿ ನೂತನ ಯತಿಗಳನ್ನು ಗಂಗಾಧರೇಂದ್ರರು ತಮ್ಮ ಶಿಷ್ಯರಾಗಿ ಸ್ವೀಕರಿಸಿ ಯೋಗ ಪಟ್ಟ ನೀಡಿದರು. ನಂತರ ಮಠದ ಆರಾಧ್ಯ ದೇವರಾದ ಲಕ್ಷ್ಮೀ ನರಸಿಂದ ದೇವರ ಪೂಜೆ, ಅಕ್ಷರಾಯುತ ಲಕ್ಷ್ಮೀ ನರಸಿಂಹ ಮಂತ್ರ ಹವನ ಪೂರ್ಣಾಹುತಿ ಮಡೆಯಿತು.

    ಶಿಷ್ಯ ಸ್ವೀಕಾರ ಮಹೋತ್ಸವದ ಅಂಗವಾಗಿ ಫೆ. 18ರಿಂದಲೇ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಪ್ರಾರಂಭವಾಗಿದ್ದವು. ಮಂಗಳವಾರ ಅಷ್ಟ ಶ್ರಾದ್ಧ ನೆರವೇರಿಸಲಾಗಿತ್ತು. ಗುರುವಾರ ಬೆಳಗ್ಗೆ 5 ಗಂಟೆಯಿಂದಲೇ ಧಾರ್ವಿುಕ ಕಾರ್ಯಕ್ರಮಗಳು ನಡೆದವು.

    ಎಡತೋರೆ ಶ್ರೀ ಶಂಕರ ಭಾರತೀ ಮಹಾ ಸ್ವಾಮೀಜಿ, ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವರೂಪಿ ಮಹಾ ಸ್ವಾಮೀಜಿ, ಬೆಂಗಳೂರಿನ ಕೂಡ್ಲಿ ಶೃಂಗೇರಿ ಮಠದ ವಿದ್ಯಾ ವಿಶ್ವೇಶ್ವರ ಭಾರತೀ ಮಹಾ ಸ್ವಾಮೀಜಿ, ಹೊಳೆನರಸೀಪುರದ ಶ್ರೀ ಪ್ರಕಾಶಾನಂದೇಂದ್ರ ಮಹಾ ಸ್ವಾಮೀಜಿ , ಶ್ರೀಮನ್ನೆಲೆಮಾವು ಮಠದ ಶ್ರೀಮಾಧವಾನಂದ ಭಾರತೀ ಮಹಾ ಸ್ವಾಮೀಜಿ, ತುರುವೆಕೆರೆಯ ಶ್ರೀ ಪ್ರಣವಾನಂದ ತೀರ್ಥ ಮಹಾ ಸ್ವಾಮೀಜಿ ಹಾಗೂ ಹಲವು ವಿದ್ವಾಂಸರು ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts