More

    ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ನೋಡಿಕೊಳ್ಳಿ

    ತಾಳಿಕೋಟೆ: ಮುದ್ದೇಬಿಹಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಮುಂಬರುವ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಈಗಿನಿಂದಲೇ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.

    ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ಸಂಬಂಧಿತ ತಾಲೂಕುಮಟ್ಟದ ಅಧಿಕಾರಿಗಳ ಟಾಸ್ಕ್‌ಫೋರ್ಸ್ ಸಭೆ ನಂತರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಮಾಹಿತಿ ಪಡೆದುಕೊಂಡಿದ್ದು, ಮಾರ್ಚ್ ಅಂತ್ಯದವರೆಗೂ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.

    ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಪ್ರತಿ ವಾರವೂ ಕೂಡಾ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ತಹಸೀಲ್ದಾರರಿಗೆ ಮತ್ತು ತಾಪಂ ಇಒ ಅವರಿಗೆ ನೀಡಬೇಕೆಂದು ಸೂಚಿಸಿದ್ದೇನೆ. ಇದರಿಂದ ನೀರಿನ ತೊಂದರೆಯ ಬಗ್ಗೆ ಮತ್ತು ಮುನ್ನೇಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.

    ಮಾರ್ಚ್ ನಂತರ ಕುಡಿಯುವ ನೀರಿನ ಸರಬರಾಜಿನಲ್ಲಿ ದಿನಗಳಲ್ಲಿ ವಿಂಗಡಿಸುವ ಕಾರ್ಯ ಮಾಡಿದರೆ ಯಾವುದೇ ತೊಂದರೆ ಆಗುವುದಿಲ್ಲ. ಆಗಿನ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ನೀರು ಸರಬರಾಜು ಮಾಡುವ ಪಂಪ್, ಮಶಿನರಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕೊಳವೆ ಬಾವಿಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ಎಲ್ಲಿ ಇದೆಯೋ ಅವುಗಳನ್ನೆಲ್ಲಾ ದುರಸ್ತಿಗೊಳಿಸಲು ತಿಳಿಸಿದ್ದೇನೆ. ಅದರ ಮೇಲ್ವಿಚಾರಣೆ ಮಾಡುವ ಗುತ್ತಿಗೆ ಪಡೆದವರು ಸಮರ್ಪಕ ಕೆಲಸ ಮಾಡದಿದ್ದರೆ ಅವರಿಗೆ ನೋಟಿಸ್ ನೀಡಬೇಕು. ನಂತರ ಎಲ್ಲವನ್ನೂ ಗ್ರಾಮ ಪಂಚಾಯಿತಿಯ ಸುಪರ್ಧಿಗೆ ಪಡೆದುಕೊಳ್ಳಲು ತಿಳಿಸಿರುವುದಾಗಿ ಮಾಹಿತಿ ನೀಡಿದರು.

    ಜೊತೆಗೆ ಕುಡಿಯುವ ನೀರಿನ ಟ್ಯಾಂಕರ್ ಒದಗಿಸಲು ಮುಂದಾಲೋಚನೆಯಿಂದ ಈಗಾಗಲೇ ಟೆಂಡರ್ ಕರೆಯಲಾಗಿದೆ. ಅದಕ್ಕೆ ಮುದ್ದೇಬಿಹಾಳದಲ್ಲಿ ಕೆಲಸವು ಜನರು ಮುಂದೆ ಬಂದರೆ ತಾಳಿಕೋಟೆಯಲ್ಲಿ ಎರಡ್ಮೂರು ಬಾರಿ ಟೆಂಡರ್ ಕರೆದರೂ ಯಾರೂ ಮುಂದೆ ಬಂದಿಲ್ಲ. ಇದಕ್ಕೆ ಗ್ರಾ.ಪಂ. ಮಟ್ಟದಲ್ಲಿಯೇ ಟ್ಯಾಂಕರ್ ವ್ಯವಸ್ಥೆ ಮಾಡಿಟ್ಟುಕೊಳ್ಳಿ ಎಂದು ತಹಸೀಲ್ದಾರರು ಈಗಾಗಲೇ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ ಎಂದರು.

    ಕುಡಿಯುವ ನೀರಿನ ತಕ್ಷಣ ತೊಂದರೆ ಬಂದರೆ ನೀಗಿಸಲಿಕ್ಕೆ ತಾಳಿಕೋಟೆ ತಾಲೂಕಾಡಳಿತ ಬಳಿ 39 ಲಕ್ಷ, ಮುದ್ದೇಬಿಹಾಳಕ್ಕೆ 25 ಲಕ್ಷ, ನಿಡಗುಂದಿಗೆ 22 ಲಕ್ಷ ರೂ. ಇದೆ ಎಂದರು. ಬರಗಾಲ ನಿರ್ವಹಣೆಗೆ ಕೂಲಿ ಕೆಲಸಗಳಿಗೆ ಈ ಮೊದಲು 100 ದಿನ ಇತ್ತು ಅದನ್ನು ವಿಸ್ತರಿಸಿ 150 ದಿನಗಳನ್ನಾಗಿ ಮಾಡಿದ್ದೇವೆ. ಎನ್‌ಡಿಆರ್‌ಆಫ್‌ಗೆ ಹೋಗಿ ಮನವಿಯನ್ನು ಸರ್ಕಾರದಿಂದ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟ್ಟಿಯಾಗಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರಧಾನ ಮಂತ್ರಿಯವರು ಸಕಾರಾತ್ಮಕವಾಗಿ ಹಣ ಕೊಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು.

    ಫೆಬ್ರವರಿ ಅಂತ್ಯದವರೆಗೂ ದನಕರುಗಳಿಗೆ ಮೇವಿನ ತೊಂದರೆ ಆಗುವುದಿಲ್ಲ. ಫೆಬ್ರವರಿ ನಂತರ ಮೇವಿನ ತೊಂದರೆ ಕಂಡುಬಂದಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆರೆಗಳಲ್ಲಿ ನೀರು ತುಂಬಿಸಿರುವುದು ಕೇವಲ ಕುಡಿಯುವ ನೀರಿಗಾಗಿ. ಅದನ್ನು ಹೊಲಗದ್ದೆಗಳಿಗೆ ಪಂಪ್‌ಸೆಟ್‌ಗಳನ್ನು ಹಚ್ಚಿ ನೀರು ಬಿಟ್ಟುಕೊಳ್ಳಬಾರದು. ಮುಂದಿನ ದಿನದಲ್ಲಿ ಕುಡಿಯುವ ನೀರಿಗೆ ತೊಂದರೆ ಆದರೆ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ. ಇಂತಹ ಪ್ರಕರಣಗಳ ಬಗ್ಗೆ ಲಕ್ಷೃ ವಹಿಸಲು ತಹಸೀಲ್ದಾರರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
    ಕೆಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ (ಯಾಳಗಿ), ಪ್ರಭುಗೌಡ ಮದರಕಲ್ಲ, ಸುರೇಶ ನಾಡಗೌಡ, ಶರಣುಧನಿ ದೇಶಮುಖ, ಸಿದ್ದನಗೌಡ ಪಾಟೀಲ, ತಹಸೀಲ್ದಾರ ಕೀರ್ತಿ ಚಾಲಕ, ತಾಳಿಕೋಟೆ ತಾ.ಪಂ. ಇಒ ಬಸನಗೌಡ ಬಿರಾದಾರ, ಮುದ್ದೇಬಿಹಾಳ ತಾಪಂ ಇಓ ವಿರೇಶ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts