More

    ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿ ಇಂಗ್ಲೆಂಡ್-ಆಸೀಸ್

    ದುಬೈ: ಸಾಂಪ್ರದಾಯಿಕ ಎದುರಾಳಿಗಳಾದ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಟಿ20 ವಿಶ್ವಕಪ್ ಟೂರ್ನಿ ಸೂಪರ್-12ರ ಹಂತದಲ್ಲಿ ಶನಿವಾರ ಎದುರಾಗಲಿವೆ. ಉಭಯ ತಂಡಗಳು ಟೂರ್ನಿಯಲ್ಲಿ ಆಡಿರುವ 2 ಪಂದ್ಯಗಳಲ್ಲೂ ಜಯ ದಾಖಲಿಸಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿವೆ. ಟೂರ್ನಿಯಲ್ಲಿ ಉಭಯ ತಂಡಗಳಿಗೂ ಮೊದಲ ಬಾರಿಗೆ ಕಠಿಣ ಸವಾಲು ಎದುರಾಗಿದೆ. ಆಸ್ಟ್ರೇಲಿಯಾ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ಎದುರು ತಿಣುಕಾಡಿ ಗೆದ್ದರೆ, ಗುರುವಾರ ಶ್ರೀಲಂಕಾ ಎದುರು ಸುಲಭ ಗೆಲುವು ದಾಖಲಿಸಿತ್ತು. ಹಲವು ದಿನಗಳಿಂದ ರನ್‌ಗಳಿಸಲು ಪರದಾಡುತ್ತಿದ್ದ ಡೇವಿಡ್ ವಾರ್ನರ್ ಫಾರ್ಮ್‌ಗೆ ಮರಳಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ. ಇಂಗ್ಲೆಂಡ್ ತಂಡ ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ಎದುರು ಜಯ ದಾಖಲಿಸಿದೆ.
    * ಆತ್ಮವಿಶ್ವಾಸದಲ್ಲಿ ಆಸೀಸ್
    ಕಳಪೆ ಫಾರ್ಮ್‌ನಿಂದಾಗಿಯೇ 14ನೇ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ತಂಡ ನಾಯಕತ್ವದ ಜತೆಗೆ ಹನ್ನೊಂದರ ಬಳಗದಿಂದಲೂ ಹೊರಬಿದ್ದಿದ್ದ ಡೇವಿಡ್ ವಾರ್ನರ್ (65) ಶ್ರೀಲಂಕಾ ಎದುರು ಸ್ಫೋಟಿಸುವ ಮೂಲಕ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ನಾಯಕ ಆರನ್ ಫಿಂಚ್ ಹಾಗೂ ವಾರ್ನರ್ ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೆ, ಬೌಲರ್‌ಗಳಾದ ಜೋಸ್ ಹ್ಯಾಸ್‌ವುಡ್, ಮಿಚೆಲ್ ಸ್ಟಾರ್ಕ್, ಆಡಂ ಜಂಪಾ ಉತ್ತಮ ಲಯದಲ್ಲಿದ್ದಾರೆ.
    * ಇಂಗ್ಲೆಂಡ್ ಹ್ಯಾಟ್ರಿಕ್ ನಿರೀಕ್ಷೆ
    ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಕೇವಲ 55 ರನ್‌ಗಳಿಗೆ ಕಟ್ಟಿಹಾಕಿದ್ದ ಇಂಗ್ಲೆಂಡ್ ತಂಡ, ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಸುಲಭ ಜಯ ದಾಖಲಿಸಿತ್ತು. ಇದೀಗ ಮೊದಲ ಬಾರಿಗೆ ಬಲಿಷ್ಠ ಸವಾಲಿಗೆ ಸಜ್ಜಾಗಿದೆ. ಮೊಯಿನ್ ಅಲಿ, ಆದಿಲ್ ರಶೀದ್ ಸ್ಪಿನ್ ವಿಭಾಗದಲ್ಲಿ ಗಮನಸೆಳೆಯುತ್ತಿದ್ದರೆ, ಜೇಸನ್ ರಾಯ್, ಜೋಸ್ ಬಟ್ಲರ್, ಜಾನಿ ಬೇರ್‌ಸ್ಟೋ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ.

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 19, ಆಸ್ಟ್ರೇಲಿಯಾ: 10, ಇಂಗ್ಲೆಂಡ್: 8, ರದ್ದು: 1
    ಟಿ20 ವಿಶ್ವಕಪ್: 2, ಆಸ್ಟ್ರೇಲಿಯಾ: 1, ಇಂಗ್ಲೆಂಡ್: 1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts