More

    ಟ್ವಿಟರ್​ ಮಾಲೀಕತ್ವ ವಹಿಸಿಕೊಳ್ಳುತ್ತಿದ್ದಂತೆ ಸಿಇಒ ಪರಾಗ್​ ಅಗರ್ವಾಲ್​ರನ್ನು ವಜಾಗೊಳಿಸಿದ ಎಲಾನ್​ ಮಸ್ಕ್​!

    ಕ್ಯಾಲಿಫೋರ್ನಿಯಾ: ಜಗತ್ತಿನ ನಂಬರ್​ 1 ಶ್ರೀಮಂತ ಹಾಗೂ ಟೆಸ್ಲಾ ಕಂಪನಿಯ ಸಿಇಒ ಎಲಾನ್​ ಮಸ್ಕ್​ ಟ್ವಿಟರ್​ ಕಂಪನಿಯ ಮಾಲೀಕತ್ವವನ್ನು ವಹಿಸಿಕೊಳ್ಳುತ್ತಿದ್ದಂತೆ ಟ್ವಿಟರ್​ನ ಉನ್ನತ ಅಧಿಕಾರಿಗಳನ್ನು ವಜಾ ಮಾಡಿರುವುದಾಗಿ ಶುಕ್ರವಾರ ವರದಿಯಾಗಿದೆ. ಟ್ವಿಟರ್​ ಖರೀದಿಯ ಒಪ್ಪಂದವನ್ನು ಶುಕ್ರವಾರ ಅಂತಿಮಗೊಳಿಸುತ್ತಿದ್ದಂತೆಯೇ ಎಲಾನ್​ ಮಸ್ಕ್​ ಈ ನಿರ್ಧಾರ ಪ್ರಕಟಿಸಿದ್ದಾರೆ ಎಂದು ತಿಳಿದುಬಂದಿದೆ.

    ಭಾರತೀಯ ಮೂಲದವರಾದ ಟ್ವಿಟರ್​ ಸಿಇಒ ಪರಾಗ್​ ಅಗರ್ವಾಲ್​ ಹಾಗೂ ನೀತಿ ನಿರೂಪಣೆಯ ಮುಖ್ಯಸ್ಥ ವಿಜಯ್​ ಗದ್ದೆ ಅವರನ್ನು ಎಲಾನ್​ ಮಸ್ಕ್​ ಕೆಲಸದಿಂದ ವಜಾಗೊಳಿಸಿದ್ದಾರೆ. ಅಲ್ಲದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್​ ಸೆಗಾಲ್​ ಸೇರಿದಂತೆ ಕೆಲ ಉನ್ನತ ಅಧಿಕಾರಿಗಳನ್ನು ಸಹ ಟ್ವಿಟರ್​ ಕಂಪನಿಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ.

    ಕೆಲಸದಿಂದ ವಜಾಗೊಳಿಸಲು ಕಾರಣವನ್ನೂ ನೀಡಿರುವ ಎಲಾನ್​ ಮಸ್ಕ್​, ಸಾಮಾಜಿಕ ಜಾಲತಾಣ ವೇದಿಕೆಯಾದ ಟ್ವಿಟರ್​ನಲ್ಲಿನ ನಕಲಿ ಖಾತೆಗಳ ಸಂಖ್ಯೆಯ ವಿಚಾರದಲ್ಲಿ ನನ್ನ ಮತ್ತು ಟ್ವಿಟರ್ ಹೂಡಿಕೆದಾರರನ್ನು ದಾರಿ ತಪ್ಪಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

    ನಾನು ಪ್ರೀತಿಸುವ ಮಾನವೀಯತೆಗಾಗಿ ಹೆಚ್ಚು ಸಹಾಯ ಮಾಡಲು ನಾನು ಟ್ವಿಟರ್​ ಖರೀದಿ ಮಾಡುತ್ತಿದ್ದೇನೆ ಎಂದು ಗುರುವಾರ ಮಸ್ಕ್​ ಹೇಳಿದರು. ನಿನ್ನೆ ಖರೀದಿ ಒಪ್ಪಂದ ಅಂತಿಮವಾಗುವಾಗ ಸ್ಯಾನ್​​ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್​ನ​ ಮುಖ್ಯ ಕಚೇರಿಯಲ್ಲಿ ನೆಡ್​ ಸೆಹಗಲ್​ ಮತ್ತು ಪರಾಗ್​ ಅಗರ್ವಾಲ್​ ಸಹ ಇದ್ದರು. ಖರೀದಿ ಒಪ್ಪಂದ ಅಂತಿಮಗೊಳಿಸುವ ಒಂದು ದಿನದ ಮುಂಚೆ ಕಚೇರಿಗೆ ಭೇಟಿ ನೀಡಿದ್ದ ಮಸ್ಕ್​, ತಮ್ಮ ಟ್ವಿಟರ್​ ಬಯೋದಲ್ಲಿ ಟ್ವಿಟರ್​ನ ಮುಖ್ಯಸ್ಥ (Chief Twit) ಎಂದು ಬದಲಾಯಿಸಿಕೊಂಡಿದ್ದರು.

    ಕಳೆದ ಏಪ್ರಿಲ್​ನಲ್ಲಿ ಟ್ವಿಟರ್​ ಖರೀದಿಸುವ 44 ಬಿಲಿಯನ್​ ಡಾಲರ್​ ಒಪ್ಪಂದವನ್ನು ಮಸ್ಕ್​ ಆರಂಭಿಸಿದ್ದರು. ಅವರು ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕಲು ಯೋಜಿಸಿದ್ದರು ಮತ್ತು ಮಾಹಿತಿ ಪಡೆಯಲು ಟ್ವಿಟರ್​ಗೆ ತಿಳಿಸಿದ್ದರು. ಆದರೆ, ಟ್ವಿಟರ್​ ಸಹಕಾರ ನೀಡುತ್ತಿಲ್ಲ ಎಂದು ಅವರ ವಕೀಲರು ಆರೋಪಿಸಿದ್ದರು. ಇದರಿಂದಾಗಿ ದಿಢೀರನೇ ತಮ್ಮ ನಿಲುವು ಬದಲಿಸಿಕೊಂಡಿದ್ದ ಮಸ್ಕ್​, ಟ್ವಿಟರ್​ ಖರೀದಿ ಒಪ್ಪಂದವನ್ನು ಮುರಿದುಕೊಂಡಿದ್ದರು. ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರೂ ಮಾಹಿತಿ ನೀಡದ್ದಕ್ಕೆ ಒಪ್ಪಂದವನ್ನು ಮುರಿದುಕೊಂಡಿರುವುದಾಗಿ ಮಸ್ಕ್​ ಸ್ಪಷ್ಟನೆ ನೀಡಿದ್ದರು. ಕಂಪನಿಯನ್ನು ಖರೀದಿಸಲು ಕಾನೂನುಬದ್ಧವಾಗಿ ಮಸ್ಕ್​ ಬದ್ಧರಾಗಿದ್ದಾರೆ ಮತ್ತು ಮೊಕದ್ದಮೆ ಹೂಡಿದ್ದಾರೆ ಎಂದು ಟ್ವಿಟರ್ ವಾದಿಸಿತು.

    ಅಕ್ಟೋಬರ್ ಆರಂಭದಲ್ಲಿ ಟ್ವಿಟರ್‌ನ ವಕೀಲರು ತಮ್ಮ ವಿಚಾರಣೆಯ ಪ್ರಾರಂಭದ ಮೊದಲು ಮಸ್ಕ್ ಅವರನ್ನು ಪದಚ್ಯುತಗೊಳಿಸಲು ನಿರ್ಧರಿಸಿದಾಗ, ಮಸ್ಕ್ ಮತ್ತೊಮ್ಮೆ ಯು-ಟರ್ನ್ ಹೊಡೆಯುವ ಮೂಲಕ ಒಪ್ಪಂದವನ್ನು ಪೂರ್ಣಗೊಳಿಸಲು ಮುಂದಾದರು. ಅದರಂತೆ ಶುಕ್ರವಾರ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಿರುವ ಮಸ್ಕ್​, ಟ್ವಿಟರ್​ನ ಮುಖ್ಯಸ್ಥರಾಗಿ ಹೊರಹೊಮ್ಮಿದ್ದಾರೆ. (ಏಜೆನ್ಸೀಸ್​)

    ಪೊಲೀಸರೇ ತೆರಬೇಕು ಕಪ್ಪ!; ಗುಮಾಸ್ತರಿಗೆ ಲಂಚ ನೀಡದೆ ಕೆಲಸವಾಗದು, ವರ್ಗಾವಣೆ ನಿಯಮ ಇವರಿಗಿಲ್ಲ ಅನ್ವಯ

    ಪಿಒಕೆ ವಶ ರಾಜನಾಥ್ ಸಿಂಗ್ ಸುಳಿವು; ಕಾಶ್ಮೀರದ ಮಾನವ ಹಕ್ಕು ಹೋರಾಟಗಾರರು, ಬುದ್ಧಿಜೀವಿಗಳಿಗೆ ತರಾಟೆ

    ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆಗೆ ಇಂದು ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts