More

    ಗ್ರಾಮ ಸರ್ಕಾರಕ್ಕಾಗಿ ಉತ್ಸಾಹದ ಮತದಾನ

    ಉಡುಪಿ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.74.10 ಮತದಾನವಾಗಿದೆ. ಹಿರಿಯರು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಉತ್ಸಾಹದಿಂದ ಮತದಾನ ಮಾಡಿದರು.

    ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಅಧಿಕ ಪ್ರಮಾಣದಲ್ಲಿ ಮತದಾನವಾಗಿದ್ದು, ಶೇ.79.51 ಮತದಾರರು ಮತ ಹಾಕಿದ್ದಾರೆ. ಬೈಂದೂರು ಭಾಗದಲ್ಲಿ ಶೇ.71.28 ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಉಡುಪಿ ತಾಲೂಕಲ್ಲಿ ಶೇ.74.80 ಮಂದಿ ಮತ ಚಲಾಯಿಸಿದ್ದರೆ, ಬ್ರಹ್ಮಾವರ ತಾಲೂಕಿನಲ್ಲಿ ಶೇ.73.79 ಮತದಾನವಾಗಿದೆ.
    ಬೈಂದೂರು ತಾಲೂಕು ಗೋಳಿಹೊಳೆ, ಬ್ರಹ್ಮಾವರ ಉಪ್ಪೂರು, ಹೆಬ್ರಿ ಪಾಡಿಗಾರು ವ್ಯಾಪ್ತಿಯಲ್ಲಿ ತಂಡ ತಂಡವಾಗಿ ಮತದಾರರು ಮತಗಟ್ಟೆಗೆ ಆಗಮಿಸಿ, ಮತ ಚಲಾಯಿಸಿದರು. ಉಡುಪಿ, ಹೆಬ್ರಿ, ಬ್ರಹ್ಮಾವರ, ಬೈಂದೂರು ಭಾಗದಲ್ಲಿ ಬೆಳಗ್ಗೆ 9 ಗಂಟೆಯೊಳಗೆ ಸರಾಸರಿ ಶೇ. 14.37ರಷ್ಟು ಮತದಾನ ದಾಖಲಾಗಿತ್ತು.

    ಹೆಬ್ರಿ ತಾಲೂಕು ವ್ಯಾಪ್ತಿ ನಾಡ್ಪಾಲು ಪಂಚಾಯಿತಿ ಸೋಮೇಶ್ವರ ಪೇಟೆ, ಕಾಸನಮಕ್ಕಿ ಮತಗಟ್ಟೆ ಸೇರಿದಂತೆ ಇತರೆ ಸೂಕ್ಷ್ಮ ಮತಗಟ್ಟೆಗಳಲ್ಲಿ ಶಸ್ತ್ರಸಜ್ಜಿತ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಜಿಲ್ಲಾ ಚುನಾವಣಾ ವೀಕ್ಷಕ ದಿನೇಶ್ ಕುಮಾರ್ ಅವರು ಸೂಕ್ಷ್ಮಮತಗಟ್ಟೆ ಕಾಸನಮಕ್ಕಿ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಭೇಟಿ ಪರಿಶೀಲನೆ ನಡೆಸಿದರು.

    ಬೈಂದೂರಿನ ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಜಡ್ಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 3ರಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಶೇ. 66.14ರಷ್ಟು ಮತದಾನವಾಗಿತ್ತು. ಗೋಳಿಹೊಳೆ ಗ್ರಾ.ಪಂ ವ್ಯಾಪ್ತಿಯ ಯಳಜಿತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಳಜಿತ್ ಗ್ರಾಮದ ಎರಡು ವಾರ್ಡ್‌ಗಳ ನಾಲ್ಕು ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮಧ್ಯಾಹ್ನ 2.45ರ ಸುಮಾರಿಗೆ ಪ್ರತೀ ಮತಗಟ್ಟೆಯಲ್ಲಿ ಶೇ. 55ಕ್ಕೂ ಅಧಿಕ ಮತದಾನ ದಾಖಲಾಗಿತ್ತು.

    ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿರುವ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯ ನಾಲ್ಕು ತಾಲೂಕು ಗಳಲ್ಲಿಯೂ ಗ್ರಾ.ಪಂ ಮೊದಲ ಹಂತದ ಚುನಾವಣೆಯು ಶಾಂತಿಯುತವಾಗಿ ನಡೆಯುತ್ತಿದೆ. ನೀತಿ ಸಂಹಿತೆ ಉಲ್ಲಂಘನೆ ಅಲ್ಲಲ್ಲಿ ಕಂಡುಬಂದಿದೆ. ಮೂರು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ತಿಳಿಸಲಾಗಿದೆ ಎಂದು ಜಿ. ಜಗದೀಶ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts