More

    ಶ್ರೀರಂಗಪಟ್ಟಣದಿಂದ ಪ್ರಸನ್ನಗೌಡ ಕಣಕ್ಕೆ?: ಸರ್ವೋದಯ ಪಕ್ಷದಿಂದ ಅಭ್ಯರ್ಥಿ ಸಾಧ್ಯತೆ

    ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಪ್ರಸನ್ನಗೌಡ ಕಣಕ್ಕಿಳಿಯುವ ಸಾಧ್ಯತೆ ಕಂಡುಬರುತ್ತಿದೆ.
    ಈಗಾಗಲೇ ಸರ್ವೋದಯ ಪಕ್ಷದಿಂದ ಮಂಡ್ಯ ಮತ್ತು ಮೇಲುಕೋಟೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಶ್ರೀರಂಗಪಟ್ಟಣ ಕ್ಷೇತ್ರದಿಂದಲೂ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ತಂತ್ರಗಾರಿಕೆ ನಡೆಯುತ್ತಿದೆ. ಅದರಂತೆ ಹೋರಾಟದ ಮೂಲಕವೇ ಗುರುತಿಸಿಕೊಂಡಿರುವ ಪ್ರಸನ್ನಗೌಡ ಅವರಿಗೆ ಮಣೆ ಹಾಕಲಾಗುತ್ತಿದೆ.
    ರೈತ ಪರ ಹೋರಾಟ ಮಾಡುವುದರ ಜತೆಗೆ ಜನಪ್ರತಿನಿಧಿಗಳಿಗೆ ಟೀಕೆಯ ಮೂಲಕ ಉತ್ತರ ನೀಡುವ ಪ್ರಸನ್ನಗೌಡ ಚುನಾವಣೆ ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಕೆಲ ತಿಂಗಳ ಹಿಂದೆಯಷ್ಟೇ ನಡೆದ ದಕ್ಷಿಣ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮಾತ್ರವಲ್ಲದೆ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡುವಂತೆ ಮತಗಳನ್ನು ಪಡೆದಿದ್ದರು. ಮೊದಲ ಪ್ರಾಶಸ್ತ್ಯದಲ್ಲಿ ಸುಮಾರು 6,500 ಸಾವಿರ ಹಾಗೂ ಎರಡನೇ ಪ್ರಾಶಸ್ತ್ಯದಲ್ಲಿಯೂ ಉತ್ತಮ ಮತಗಳನ್ನು ಪಡೆದುಕೊಂಡಿದ್ದರು. ಚುನಾವಣೆ ನಂತರವೂ ಹಲವು ರೈತ ಪರ ಹೋರಾಟದಲ್ಲಿ ಭಾಗಿಯಾದರು. ಪ್ರಮುಖವಾಗಿ ಪ್ರತಿ ಟನ್ ಕಬ್ಬಿಗೆ 4,500 ರೂ ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ ನಿಗದಿ ಮಾಡಬೇಕೆಂದು ನಗರದಲ್ಲಿ ನಡೆದಿದ್ದ ಅನಿರ್ದಿಷ್ಟಾವಧಿ ಧರಣಿಯ ನೇತೃತ್ವ ವಹಿಸಿದ್ದರು.
    ಈ ನಡುವೆಯೇ ಸರ್ವೋದಯ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ನಿಯೋಜನೆಗೊಂಡರು. ಮಾತ್ರವಲ್ಲದೆ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ತಮ್ಮ ಸ್ನೇಹಿತರ ಪರ ಮಾತಯಾಚನೆ ಮಾಡುತ್ತಿದ್ದಾರೆ. ಅಂತೆಯೇ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರ ಪ್ರಸ್ತಾಪವಾಗಿದ್ದು, ಸಂಘಟನೆ ಪದಾಧಿಕಾರಿಗಳು ಪ್ರಸನ್ನಗೌಡ ಅವರ ಹೆಸರು ಸೂಚಿಸಿದ್ದಾರೆ. ಮೂಲತಃ ಶ್ರೀರಂಗಪಟ್ಟಣದವರೇ ಆಗಿರುವುದರಿಂದ ಸ್ಪರ್ಧೆ ಮಾಡಿದರೆ ಅನುಕೂಲವಾಗಲಿದೆ. ಆದ್ದರಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲವೂ ಅಂದುಕೊಂಡಂತಾದರೆ ಶೀಘ್ರವೇ ಘೋಷಣೆಯಾಗಿದೆ.
    ಸ್ಪರ್ಧೆಗಿಳಿದರೆ ಕಾಂಗ್ರೆಸ್‌ಗೆ ನಷ್ಟ: ಪ್ರಸನ್ನಗೌಡ ಸ್ಪರ್ಧೆ ಮಾಡಿದರೆ ಆಗುವ ಲಾಭ-ನಷ್ಟದ ಲೆಕ್ಕಾಚಾರದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅದರಂತೆ ಸ್ಪರ್ಧೆ ಖಚಿತವಾಗಿ ಚುನಾವಣೆ ಅಖಾಡಕ್ಕೆ ಬಂದರೆ ಕಾಂಗ್ರೆಸ್‌ಗೆ ನಷ್ಟವಾಗುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಕಾರಣವೂ ಇದೆ. ಸಾಮಾನ್ಯವಾಗಿ ರೈತ ಸಂಘದ ಸಾಂಪ್ರಾದಾಯಿಕ ಮತಗಳು ಬಿಜೆಪಿ ಮತ್ತು ಜೆಡಿಎಸ್‌ಗೆ ಬರುವುದಿಲ್ಲ. ಆದ್ದರಿಂದ ಅದು ಕಾಂಗ್ರೆಸ್‌ಗೆ ಫ್ಲಸ್ ಆಗುತ್ತಿತ್ತು. ಆದರೀಗ ರೈತ ಸಂಘದಿಂದಲೇ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ಗೆ ಹೋಗುತ್ತಿದ್ದ ಮತಗಳ ವಿಭಜನೆಯಾದರೂ ಅಚ್ಚರಿಯಿಲ್ಲ. ಈಗಾಗಲೇ ಶ್ರೀರಂಗಪಟ್ಟಣ ಕಾಂಗ್ರೆಸ್‌ನಲ್ಲಿ ಮೂಲ ವರ್ಸಸ್ ವಲಸಿಗ ಎನ್ನುವ ಗದ್ದಲದ ನಡುವೆ ಸರ್ವೋದಯ ಪಕ್ಷವೂ ಅಖಾಡಕ್ಕೆ ಬಂದರೆ ನಷ್ಟ ಕಟ್ಟಿಟ್ಟು ಬುತ್ತಿಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts