More

    ಮಕ್ಕಳಿಗೆ ಶಿಕ್ಷಣ ಕೊಡುವುದೇ ನಿಜವಾದ ದೇವರ ಪೂಜೆ

    ರಿಪ್ಪನ್‌ಪೇಟೆ: ವ್ಯಕ್ತಿತ್ವ ನಿರ್ಮಾಣದಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯ, ರಾಷ್ಟ್ರದ ಅಭ್ಯುದಯದಲ್ಲಿ ಮಾನವ ಸಂಪನ್ಮೂಲದ ಪಾತ್ರ ಪ್ರಮುಖವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಅದೇ ದೇವರ ಪೂಜೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

    ಸಮೀಪದ ಅಮೃತ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ದೊಡ್ಡ ಇಲಾಖೆಯಾಗಿದೆ. ಸಮಸ್ಯೆಗಳು ಸಾಕಷ್ಟಿದ್ದು, ಅವುಗಳನ್ನು ಚರ್ಚಿಸುತ್ತ ಕುಳಿತುಕೊಳ್ಳುವುದಕ್ಕಿಂತ ಪರಿಹಾರ ಮಾರ್ಗವಾಗಿ ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿರ್ಮಾಣ ಮಾಡುವುದೇ ಸೂಕ್ತ ಎಂದೆನಿಸಿದೆ. ಗ್ರಾಮೀಣ ಮಕ್ಕಳಿಗೆ ಇದೊಂದು ಉತ್ತಮ ಮಾರ್ಗವಾಗಿದ್ದು, ರಾಜ್ಯದ ಯಶಸ್ವಿ ಕಾರ್ಯಕ್ರಮವಾಗಿದೆ ಎಂದರು.
    ಸಾರ್ವಜನಿಕರ ಬೇಡಿಕೆಯಂತೆ ಈ ಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್ ಮಾಧ್ಯಮಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಭಾಷಾ ವಿಷಯವಾಗಿ ಕನ್ನಡ ಕಲಿಕೆ ಇದ್ದೇ ಇರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್‌ಕೆಜಿ, ಯುಕೆಜಿಗಳನ್ನು ಈ ಶಾಲೆಯಲ್ಲಿಯೇ ಆರಂಭಿಸಲು ಚಿಂತನೆ ನಡೆದಿದೆ. ಒಟ್ಟಾರೆಯಾಗಿ 12ನೇ ತರಗತಿಯವರೆಗೆ ಒಂದೇ ಸೂರಿನಡಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
    ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ 2,500 ಕೋಟಿ ರೂ. ವೆಚ್ಚದಲ್ಲಿ 500 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ತೆರೆಯಲಾಗುವುದು. ಇನ್ನುಳಿದ ಮೂರು ವರ್ಷಗಳಲ್ಲಿ ಒಂದು ಗ್ರಾಪಂಗೆ ಎರಡರಂತೆ ರಾಜ್ಯದಲ್ಲಿ ಮೂರು ಸಾವಿರ ಕೆಪಿಎಸ್ ನಿರ್ಮಾಣ ಮಾಡುತ್ತೇವೆ. ರಾಜ್ಯ ಸರ್ಕಾರ ಶಿಕ್ಷಣಕ್ಕೆ ಮತ್ತು ಮಕ್ಕಳ ಪೌಷ್ಟಿಕತೆಗೆ ಹೆಚ್ಚು ಆದ್ಯತೆ ನೀಡಿದ್ದು, ಯೋಜನೆಗಳನ್ನು ರೂಪಿಸಿ ಸಾಕಾರಗೊಳಿಸುತ್ತಿದೆ. ಇದು ಸರ್ಕಾರದ ಯೋಜನೆಗಳಾದರೆ ಮಕ್ಕಳನ್ನು ಮತ್ತೆ ಶಾಲೆಗೆ ಕರೆತಂದು ಶಾಲಾ ವಾತಾವರಣವನ್ನು ಸುಂದರಗೊಳಿಸುವ ಜವಾಬ್ದಾರಿಯನ್ನು ಶಿಕ್ಷಕರು ಮತ್ತು ಸಿಬ್ಬಂದಿ ತೆಗೆದುಕೊಳ್ಳಬೇಕು. ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿ ಎಂದರು.
    ಮಕ್ಕಳೆ ನಿಮ್ಮ ಕಲಿಕೆಗೆ ಸಾರ್ವಜನಿಕ ತೆರಿಗೆ ಹಣ ಬಳಸಲಾಗುತ್ತಿದೆ. ಅರ್ಥ ಮಾಡಿಕೊಂಡು ಸವಲತ್ತುಗಳ ಬಳಕೆಯನ್ನು ಪಡೆದು ಚೆನ್ನಾಗಿ ಓದಿ, ವಿದ್ಯಾವಂತರಾಗಿರಿ. ದೇವರು ಓಳ್ಳೆಯದು ಮಾಡಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
    ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅರ್ಪಣಾ ಮನೋಭಾವದ ಅಧ್ಯಾಪಕರಿದ್ದರೆ ಪೂರಕವಾಗಿ ಸ್ಪಂದಿಸುವ ಶಾಲಾ ಅಭಿವೃದ್ಧಿ ಸಮಿತಿಗಳಿದ್ದರೆ ಶಾಲೆಗಳ ಸಮಗ್ರ ಅಭಿವೃದ್ಧಿ ಆಗುತ್ತದೆ. ಚೆನ್ನಾಗಿ ನಡೆಯುವ ಶಾಲೆಗಳಿಗೆ ನಾವುಗಳು ಏನುಕೊಟ್ಟರೂ ಸಾಲದು. ಇರುವವರು ಎಲ್ಲೆಲ್ಲೋ ಓದಿಸುತ್ತಾರೆ. ಆದರೆ ಬಡವನ ಮಗನಿಗೆ ಒಳ್ಳೆಯ ಶಿಕ್ಷಣ ಬೇಕಲ್ಲ. ನಾಳಿನ ದೇಶ ಸುಭಿಕ್ಷವಾಗಿರಬೇಕಾದರೆ ಇವತ್ತು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಇಂತಹ ಮಹತ್ ಕಾರ್ಯವನ್ನು ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಸಂಘಟಿತವಾಗಿ ಮಾಡಬೇಕು ಎಂದರು.
    ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕಡೆಗೆ ಪಾಲಕರು ಗಮನಹರಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು ಅಗತ್ಯ ಮೂಲ ಸೌಕರ್ಯಗಳನ್ನು ಹೊಂದಿವೆ ಎಂದು ಹೇಳಿದರು.
    ಮಾಜಿ ಸಚಿವ ಕಿಮ್ಮನೆ ರತ್ನಾಕರ, ಗ್ರಾಪಂ ಅಧ್ಯಕ್ಷ ವಿಶ್ವನಾಥ ಗಂಧ್ರಳ್ಳಿ, ಉಪಾಧ್ಯಕ್ಷೆ ವಿನೋದಾ, ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಟಿ.ಡಿ.ಸೋಮಶೇಖರ, ಉಪಾಧ್ಯಕ್ಷ ನಾಗೇಶ ಉಂಬ್ಳೆಬೈಲು, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ತಹಸೀಲ್ದಾರ್ ಎಚ್.ಜಿ.ರಶ್ಮಿ, ತಾಪಂ ಇಒ ನರೇಂದ್ರ ಕುಮಾರ್, ಬಿಇಒ ಎಚ್.ಆರ್.ಕೃಷ್ಣಮೂರ್ತಿ, ಪ್ರಾಚಾರ್ಯ ಮಹ್ಮದ್ ನಜ್ಹತ್‌ವುಲ್ಲಾ, ಶಿಕ್ಷಕರಾದ ಪ್ರಭಾವತಿ ಹೆಗಡೆ, ಶ್ರೀದೇವಿ, ಮುಖಂಡರಾದ ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ ಇತರರಿದ್ದರು.

    ವಿದ್ಯುತ್ ಬಿಲ್ ಮನ್ನಾ
    ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಂಪ್ಯೂಟರ್ ಕಲಿಕೆ ಮತ್ತು ಸ್ಪೆಷಲ್ ಕ್ಲಾಸ್‌ಗಳನ್ನು ಮಾಡಲಾಗುತ್ತದೆ. ಇದರಿಂದ ಸ್ವಾಭಾವಿಕವಾಗಿ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ. ಆದರೆ ತಿಂಗಳ ಅಂತ್ಯದಲ್ಲಿ ಹೊರೆಯಾದ ವಿದುತ್ಫಕ್ತಿ ಬಿಲ್ಲನ್ನು ಕಟ್ಟಲು ಶಾಲಾ ಆಡಳಿತ ಮಂಡಳಿಗೆ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಿಂದ ಗಣಕಯಂತ್ರಗಳು ಉಪಯೋಗಿಸದೆ ಮೂಲೆ ಸೇರಿಸಿರುವುದರನ್ನು ಗಮನಿಸಿದ್ದೇನೆ. ಆದ್ದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಲೆಯ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗ ಶಿಕ್ಷಕರು ಸಮರ್ಥವಾಗಿ ಕಾರ್ಯನಿರ್ವಹಿಸಬಹುದು ಎಂದು ಮಧು ಬಂಗಾರಪ್ಪತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts