More

    ಇಂದಿನಿಂದ ಒಲಿಂಪಿಕ್ಸ್ ಅಥ್ಲೆಟಿಕ್ಸ್ ಸ್ಪರ್ಧೆ, ಯಾರಾಗ್ತಾರೆ ಅತಿವೇಗದ ಓಟಗಾರ?

    ಟೋಕಿಯೊ: ಒಲಿಂಪಿಕ್ಸ್‌ನ ಅತ್ಯಂತ ಕುತೂಹಲಕಾರಿ ಸ್ಪರ್ಧೆ ಎನಿಸಿದ ಅಥ್ಲೆಟಿಕ್ಸ್ ಸ್ಪರ್ಧೆಗಳು ಶುಕ್ರವಾರ ಶುರುವಾಗಲಿದ್ದು, ಉದ್ಘಾಟನಾ ಸಮಾರಂಭ ನಡೆದ ನ್ಯಾಷನಲ್ ಸ್ಟೇಡಿಯಂ ವೇದಿಕೆಯಾಗಲಿದೆ. ಅಥ್ಲೆಟಿಕ್ಸ್‌ನ ಟ್ರ್ಯಾಕ್ ಆಂಡ್ ಫೀಲ್ಡ್‌ನಲ್ಲಿ ಒಟ್ಟು 48 ಸ್ವರ್ಣ ಪದಕ ಸ್ಪರ್ಧೆಗಳು ನಡೆಯಲಿವೆ. ಈ ಪೈಕಿ ಮೊದಲ ದಿನ ಒಂದೇ ಚಿನ್ನದ ಪದಕ (ಪುರುಷರ 10 ಸಾವಿರ ಮೀ.) ನಿರ್ಧಾರವಾಗಲಿದೆ.

    ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಇಲ್ಲದ ಕಾರಣ ಅಥ್ಲೆಟಿಕ್ಸ್ ಈ ಬಾರಿ ಒಂದಿಷ್ಟು ಸ್ಟಾರ್ ಆಕರ್ಷಣೆ ಕಳೆದುಕೊಂಡಿದ್ದರೂ, ಒಲಿಂಪಿಕ್ಸ್‌ನ ಹೊಸ ಅತಿವೇಗದ ಓಟಗಾರ ಯಾರಾಗುತ್ತಾರೆ ಎಂಬ ಕುತೂಹಲವಿದೆ. ಮಹಿಳಾ ವಿಭಾಗದಲ್ಲಿ ಶೆಲ್ಲಿ ಆನ್ ಫ್ರೇಸರ್, ಆಲಿಸನ್ ಫೆಲಿಕ್ಸ್ ತಾರಾ ಆಕರ್ಷಣೆಯಾಗಿದ್ದಾರೆ. ಆದರೆ ಈ ಬಾರಿ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಸ್ಪರ್ಧಿಸಲಿರುವುದು ಅಥ್ಲೀಟ್‌ಗಳಿಗೆ ಹೊಸ ಅನುಭವ ನೀಡಲಿದೆ.

    ಭಾರತದಿಂದ ಒಟ್ಟು 26 ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದು, ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಪ್ರಮುಖ ಪದಕ ಆಕಾಂಕ್ಷಿಯಾಗಿದ್ದಾರೆ. ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ವಿಶ್ವ ನಂ. 6 ಕಮಲ್‌ಪ್ರೀತ್ ಕೌರ್ ಮೇಲೆ ನಿರೀಕ್ಷೆಗಳಿವೆ. ಉಳಿದಂತೆ ಜಾವೆಲಿನ್ ಎಸೆತದಲ್ಲಿ ಶಿವಪಾಲ್ ಸಿಂಗ್, ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್, ಶಾಟ್‌ಪುಟ್‌ನಲ್ಲಿ ತೇಜಿಂದರ್ ಪಾಲ್ ಟೂರ್ ಫೈನಲ್‌ಗೇರುವ ನಿರೀಕ್ಷೆಗಳಿವೆ.

    ಉಸೇನ್ ಬೋಲ್ಟ್ ಉತ್ತರಾಧಿಕಾರಿ ಯಾರು?
    ಕಳೆದ ಮೂರು ಒಲಿಂಪಿಕ್ಸ್‌ಗಳಲ್ಲೂ 100 ಮೀಟರ್ ಓಟದ ಸ್ವರ್ಣ ಪದಕ ಜಯಿಸಿ ವಿಶ್ವ ಅತಿ ವೇಗದ ಓಟಗಾರ ಎನಿಸಿದ್ದ ಜಮೈಕಾದ ಉಸೇನ್ ಬೋಲ್ಟ್ ಈಗ ಟ್ರ್ಯಾಕ್‌ನಿಂದ ಹೊರನಡೆದಿದ್ದಾರೆ. ಹೀಗಾಗಿ 2008ರ ಬಳಿಕ ಮೊದಲ ಬಾರಿಗೆ ಹೊಸ 100 ಮೀಟರ್ ಓಟದ ಚಾಂಪಿಯನ್ ಅನ್ನು ಕಾಣುವ ಅವಕಾಶ ಒಲಿಂಪಿಕ್ಸ್‌ನಲ್ಲಿದೆ. ಬೋಲ್ಟ್ ಅವರ ಉತ್ತರಾಧಿಕಾರಿ ಪಟ್ಟವನ್ನು ಅಲಂಕರಿಸಲು ಹಲವು ಓಟಗಾರರು ರೇಸ್‌ನಲ್ಲಿದ್ದಾರೆ. ಜತೆಗೆ ಬೋಲ್ಟ್ ಅವರ 9.58 ಸೆಕೆಂಡ್‌ಗಳ ವಿಶ್ವದಾಖಲೆಯನ್ನು ಮುರಿಯಬಹುದೇ ಎಂಬ ಕುತೂಹಲವೂ ಇದೆ. ಬೋಲ್ಟ್ ಬಳಿಕ 100 ಮೀಟರ್ ಓಟದ ಫೇವರಿಟ್ ಎನಿಸಿದ್ದ ಅಮೆರಿಕದ ಕ್ರಿಶ್ಚಿಯನ್ ಕೋಲ್‌ಮನ್ ಈ ಬಾರಿ ಡೋಪಿಂಗ್ ನಿಷೇಧದಿಂದಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಮೆರಿಕದ ಮತ್ತೊರ್ವ ಯುವ ಓಟಗಾರ ನೋಹ್ ಲೈಲ್ಸ್, ಕೆನಡದ ಆಂಡ್ರೆ ಡಿ ಗ್ರಾಸ್, ಅಮೆರಿಕದ ಅನುಭವಿ ಓಟಗಾರ ಜಸ್ಟಿನ್ ಗ್ಯಾಟ್ಲಿನ್, ದಕ್ಷಿಣ ಆಫ್ರಿಕಾದ ಅಕಾನಿ ಸಿಂಬಿನ್, ಚೀನಾದ ಕ್ಸಿ ಜೆನ್ಯೆ, ಅಮೆರಿಕದ ರೋನಿ ಬೇಕರ್, ಜಪಾನ್‌ನ ಕಿರ‌್ಯು ಯೊಶಿಹಿಡ್ 100 ಮೀಟರ್ ಓಟದ ಫೇವರಿಟ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

    *ಭಾರತೀಯರ ಪ್ರಮುಖ ಸ್ಪರ್ಧೆಗಳ ದಿನ:
    ಜಾವೆಲಿನ್ ಎಸೆತ: ನೀರಜ್ ಚೋಪ್ರಾ, ಶಿವಪಾಲ್ ಯಾದವ್ (ಆಗಸ್ಟ್ 4, 7), ಅನ್ನು ರಾಣಿ (ಆಗಸ್ಟ್ 3, 6).
    ಡಿಸ್ಕಸ್ ಥ್ರೋ: ಸೀಮಾ ಪೂನಿಯಾ, ಕಮಲ್‌ಪ್ರೀತ್ ಕೌರ್ (ಜುಲೈ 31, ಆಗಸ್ಟ್ 2).
    ಶಾಟ್‌ಪುಟ್: ತೇಜಿಂದರ್ ಪಾಲ್ ಟೂರ್ (ಆಗಸ್ಟ್ 3, 5).
    ಲಾಂಗ್‌ಜಂಪ್: ಮುರಳಿ ಶ್ರೀಶಂಕರ್ (ಜುಲೈ 31, ಆಗಸ್ಟ್ 2).
    100, 200 ಮೀ.: ದ್ಯುತಿ ಚಂದ್ (ಜುಲೈ 30-31, ಆಗಸ್ಟ್ 2-3).
    20 ಕಿಮೀ ನಡಿಗೆ: ಕೆಟಿ ಇರ್ಫಾನ್, ಸಂದೀಪ್ ಕುಮಾರ್, ರಾಹುಲ್ ರೋಹಿಲ (ಆಗಸ್ಟ್ 5).

    *ಅಥ್ಲೆಟಿಕ್ಸ್ ಪ್ರಮುಖ ಸ್ಪರ್ಧೆಗಳ ದಿನ:
    ಪುರುಷರ ವಿಭಾಗ: 100 ಮೀಟರ್ ಫೈನಲ್: ಆಗಸ್ಟ್ 1; 200 ಮೀ. ಫೈನಲ್: ಆಗಸ್ಟ್ 4; 400 ಮೀ. ಫೈನಲ್: ಆಗಸ್ಟ್ 5, 800 ಮೀ. ಫೈನಲ್: ಆಗಸ್ಟ್ 4; 4/100 ಮೀ. ರಿಲೇ ಫೈನಲ್: ಆಗಸ್ಟ್ 6; ಜಾವೆಲಿನ್ ಎಸೆತ ಫೈನಲ್: ಆಗಸ್ಟ್ 7; ಮ್ಯಾರಥಾನ್: ಆಗಸ್ಟ್ 8.
    ಮಹಿಳಾ ವಿಭಾಗ: 100 ಮೀ. ಫೈನಲ್: ಜುಲೈ 31; 200 ಮೀ. ಫೈನಲ್: ಆಗಸ್ಟ್ 3; 400 ಮೀ. ಫೈನಲ್: ಆಗಸ್ಟ್ 6; 800 ಮೀ. ಫೈನಲ್: ಆಗಸ್ಟ್ 3; ಡಿಸ್ಕಸ್ ಥ್ರೋ ಫೈನಲ್: ಆಗಸ್ಟ್ 2; ಮ್ಯಾರಥಾನ್: ಆಗಸ್ಟ್ 7.
    4/400 ಮೀ. ಮಿಶ್ರ ರಿಲೇ ಫೈನಲ್: ಜುಲೈ 31.

    *ನೇರಪ್ರಸಾರ: ಸೋನಿ ನೆಟ್‌ವರ್ಕ್, ಡಿಡಿ ಸ್ಪೋರ್ಟ್ಸ್.

    ಅಪ್ಪನ ಇಚ್ಛೆಗೆ ವಿರುದ್ಧವಾಗಿ ಬಾಕ್ಸಿಂಗ್ ರಿಂಗ್ ಪ್ರವೇಶಿಸಿದ್ದವಳು ಈಗ ಒಲಿಂಪಿಕ್ಸ್ ಪದಕಕ್ಕೆ ಸನಿಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts