More

    ಜಲಕ್ಷಾಮದ ಭೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಜಲಕ್ಷಾಮ ಎದುರಾಗುತ್ತಿದ್ದು, 12 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಭಾರಿ ಅಭಾವ ತಲೆದೋರಿದೆ. ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕುಸಿದ ಕಾರಣ ರೇಷನಿಂಗ್ ಆರಂಭಿಸಲಾಗಿದೆ. ಇನ್ನೆರಡು ವಾರ ಮಳೆಯಾಗದಿದ್ದರೆ ತುಂಬೆ ಡ್ಯಾಂ ಕೂಡಾ ಸಂಪೂರ್ಣ ಖಾಲಿಯಾಗುವ ಪರಿಸ್ಥಿತಿ ಇದೆ.


    ಬಾಳೆಪುಣಿ, ನರಿಂಗಾಣ, ತಲಪಾಡಿ, ಮುಡಿಪು, ಮೊದಲಾದ ಕಡೆಗಳಲ್ಲಿ ಕುಡಿಯುವ ನೀರಿನ ಭಾರೀ ಅಭಾವ ಉಂಟಾಗಿದೆ. ಅಲ್ಲಿಗೆ ಟ್ಯಾಂಕರ್ ಮೂಲಕ ಮತ್ತು ಉಪಯೋಗಿಸದೆ ಇದ್ದ ನೀರು ಇರುವ ಬೋರ್‌ವೆಲ್‌ಗಳನ್ನು ಸರಿಪಡಿಸಿ ನೀರು ಪೂರೈಸಲಾಗುತ್ತಿದೆ. ತುಂಬೆ ವೆಂಟೆಡ್ ಡ್ಯಾಂನಲ್ಲಿ ಶನಿವಾರ ನೀರಿನ ಮಟ್ಟ 4.09 ಮೀಟರ್‌ಗೆ ಕುಸಿದಿದೆ. ಶುಕ್ರವಾರ 4.10 ಮೀಟರ್ ಇತ್ತು. ಭಾನುವಾರ ಮಂಗಳೂರು ಉತ್ತರ ಕ್ಷೇತ್ರಕ್ಕೆ ನೀರು ಪೂರೈಕೆಯಾಗಲಿದೆ.


    2016ರಲ್ಲಿ ಮಂಗಳೂರಿನಲ್ಲಿ ಹಿಂದೆಂದೂ ಕಂಡರಿಯದ ಭೀಕರ ನೀರಿನ ಕೊರತೆ ಉಂಟಾಗಿತ್ತು. ತುಂಬೆ ಡ್ಯಾಂನಲ್ಲಿ ನೀರಿಲ್ಲದೆ, ನಗರದಲ್ಲಿ ಬಾವಿ, ಬೋರ್‌ವೆಲ್‌ಗಳನ್ನು ಸರಿಪಡಿಸಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ಕೊನೆಗೆ ಕುದುರೆಮುಖದ ಲಕ್ಯಾ ಡ್ಯಾಂ ನೀರನ್ನು ತರಲಾಗಿತ್ತು. 2017ರಲ್ಲಿ ಪಾಲಿಗೆ ಮುಂಜಾಗ್ರತೆ ವಹಿಸಿ ಪ್ರತಿ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್ ಆರಂಭಿಸಿತ್ತು.


    2019ರಲ್ಲಿ ಎಪ್ರಿಲ್ 11ರಿಂದ ಮೊದಲನೇ ಹಂತದ ನೀರಿನ ರೇಷನಿಂಗ್ ಆರಂಭಗೊಂಡಿತ್ತು. ಆದರೆ, ಆಗ ತುಂಬೆ ಡ್ಯಾಮ್ ನಲ್ಲಿ 5.5 ಮೀ.ನಷ್ಟು ನೀರಿನ ಮಟ್ಟ ಇತ್ತು. ನಂತರದ ವರ್ಷಗಳಲ್ಲಿ ಬೇಸಗೆಯಲ್ಲಿ ಮಳೆ ಸುರಿದ ಪರಿಣಾಮ ನಗರದಲ್ಲಿ ನೀರಿನ ಸಮಸ್ಯೆ ಬಂದಿರಲಿಲ್ಲ. ಆದರೆ, ಈ ಬಾರಿ ಬೇಸಗೆಯಲ್ಲಿ ಮಳೆಯೇ ಸುರಿದಿಲ್ಲ. ಇದರಿಂದಾಗಿ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಪ್ರಮಾಣ ತೀವ್ರ ಕುಸಿದಿದೆ. ತುಂಬೆ ಕೆಳ ಭಾಗದಲ್ಲಿ ಹೊಸತಾಗಿ ಅಡ್ಯಾರ್ ನಲ್ಲಿ ಮಾಡಿರುವ ಅಣೆಕಟ್ಟಿನಿಂದ ನೀರೆತ್ತುವ ಕೆಲಸ ಆಗುತ್ತಿದೆ. ಆದರೂ ಎರಡು ವಾರಗಳಿಗೆ ಬೇಕಾಗುವಷ್ಟು ಮಾತ್ರ ನೀರಿದೆ.


    ಕಾಲೇಜುಗಳಿಗೆ ತಟ್ಟಿದ ನೀರಿನ ಸಮಸ್ಯೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಾಲೇಜು ತರಗತಿಗಳಿಗೂ ತಟ್ಟಿದೆ. ಬಹುತೇಕ ಕಾಲೇಜುಗಳಿಗೆ ನೀರು ಸರಬರಾಜು ಸಮಸ್ಯೆ ಕಾಡುತ್ತಿದೆ. ಹಾಸ್ಟೆಲ್ ಹೊಂದಿರುವ ಕಾಲೇಜುಗಳಲ್ಲಿ ನೀರಿನ ಕೊರತೆ ಬಹು ದೊಡ್ಡ ಸಮಸ್ಯೆಯಾಗಿದೆ. ಕುಡಿಯುವ ನೀರಿನ ಸಮಸ್ಯೆಯಿರುವ ಕಾಲೇಜುಗಳಲ್ಲಿ ಆನ್‌ಲೈನ್ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಸಂಜೆ 4ರ ವರೆಗೆ ನಡೆಯುತ್ತಿದ್ದ ಕೆಲವು ಕಾಲೇಜುಗಳ ಸಮಯವನ್ನು ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರ ನಡೆಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts