More

    ಮಹಾಮಾರಿ ಕೋವಿಡ್ ಲಕ್ಷಣವಿದ್ದರೂ ಪರೀಕ್ಷಿಸಿಕೊಳ್ಳಲು ಹಿಂದೇಟು

    ರೋಣ: ಕೋವಿಡ್ ಬಗ್ಗೆ ಜನರಲ್ಲಿ ಭಯ ಇರುವುದರಿಂದಲೇ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುವ ಪ್ರಮಾಣ ಹೆಚ್ಚಿದೆ. ಕೋವಿಡ್ ಲಕ್ಷಣಗಳಿದ್ದರೂ ಜನ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
    ನೆಗಡಿ, ಜ್ವರ, ಮೈ ಕೈ ನೋವು, ತಲೆ ನೋವು, ಕಫ, ಗಂಟಲ ಬೇನೆಯಂತಹ ಲಕ್ಷಣಗಳು ಕಂಡುಬಂದರೂ ಜನ ಔಷಧ ಅಂಗಡಿಗಳಲ್ಲಿ ಮಾತ್ರೆ ತೆಗೆದುಕೊಂಡು ಸುಮ್ಮನಾಗುತ್ತಿದ್ದಾರೆ ವಿನಃ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ವೈದ್ಯರ ಬಳಿ ಹೋದರೆ ಕರೊನಾ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎನ್ನುವ ಸಲಹೆ ನೀಡುತ್ತಿದ್ದಾರೆ. ಆದರೆ, ಜನ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ. ರೋಣ ಭಾಗದಲ್ಲಿ ಅನೇಕರಿಗೆ ಟೈಫಾಯ್್ಡ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ, ಬಹುತೇಕರು ತಮಗೂ ಟೈಫಾಯ್್ಡ ಎಂದು ಅದಕ್ಕೆ ಸಂಬಂಧಿಸಿದ ಔಷಧವನ್ನು ಖುದ್ದಾಗಿ ಪಡೆಯುತ್ತಿದ್ದಾರೆ. ಕೋವಿಡ್ ರೋಗ ಲಕ್ಷಣಗಳು ಕಂಡುಬಂದರೂ ಜನರು ಕೋವಿಡ್ ಪರೀಕ್ಷೆಗೆ ಮುಂದಾಗದಿರುವುದಕ್ಕೆ ಅವರಲ್ಲಿರುವ ಭಯವೇ ಮುಖ್ಯ ಕಾರಣ ಎನ್ನುತ್ತಾರೆ ಖಾಸಗಿ ವೈದ್ಯರೊಬ್ಬರು.
    ‘ಔಷಧ ಅಂಗಡಿಗಳಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ತಕ್ಕ ಮಟ್ಟಿಗೆ ಪ್ರಾಥಮಿಕ ಹಂತದ ಕಾಯಿಲೆಯಿಂದ ಗುಣವಾದಂತೆ ಕಂಡರೂ ವೈರಸ್ ಪ್ರಮಾಣ ದಿನದಿಂದ ದಿನಕ್ಕೆ ದೇಹದಲ್ಲಿ ಹೆಚ್ಚಾಗುತ್ತಲೆ ಇರುತ್ತದೆ. ನಂತರ ಶ್ವಾಸಕೋಶಕ್ಕೆ ತಗುಲಿ ಉಸಿರಾಟದ ಸಮಸ್ಯೆಯಾಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಆಗ ನಾವು ಕಡ್ಡಾಯವಾಗಿ ಆಕ್ಸಿಜನ್ ಕೊಡಬೇಕಾಗುತ್ತದೆ. ಸದ್ಯ ಆಕ್ಸಿಜನ್ ಸರಬರಾಜು ಕಡಿಮೆ ಇರುವುದರಿಂದ ಆಕ್ಸಿಜನ್ ಬೆಡ್ ಸಿಗದೆ ಕೆಲವರು ಜೀವಕ್ಕೆ ಹಾನಿ ಉಂಟು ಮಾಡಿಕೊಳ್ಳುತ್ತಿದ್ದಾರೆ. ಕರೊನಾ ಸೋಂಕಿನ ಲಕ್ಷಣವಿದ್ದರೂ ಭಯದಿಂದಾಗಿ ಟೈಫಾಯ್್ಡ ಆಗಿದೆ ಎಂದು ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಮೈಕೈ, ತಲೆ ನೋವು, ಜ್ವರ ಮೂರ್ನಾಲ್ಕು ದಿನಗಳವರೆಗೆ ಇದ್ದರೆ ಕಡ್ಡಾಯವಾಗಿ ಕರೊನಾ ಟೆಸ್ಟ್ ಮಾಡಿಸಿಕೊಂಡರೆ, ನಮಗೂ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ರೋಣ ತಾಲೂಕು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಎಸ್.ಎಲ್. ಗಿರಡ್ಡಿ.
    ಜನ ನೇರವಾಗಿ ಔಷಧ ಪಡೆದು ತೊಂದರೆಗೆ ಸಿಲುಕುವ ಬದಲು ವೈದ್ಯರನ್ನು ಕಂಡು ಅಗತ್ಯವಿದ್ದರೆ ಕರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಇಲ್ಲದೆ ಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಡಾ. ಗಿರಡ್ಡಿ.

    ಕಳೆದೊಂದು ವಾರದಿಂದ ತಾಲೂಕಿನ ಹಿರೇಹಾಳ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜ್ವರ, ಮೈ ಕೈ, ತಲೆ ನೋವು ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಕಡ್ಡಾಯವಾಗಿ ಕರೊನಾ ಪರೀಕ್ಷೆ ಮಾಡಿಕೊಳ್ಳುವಂತೆ ನಾವು ಸೂಚಿಸುತ್ತೇವೆ. ಆದರೆ, ಜನರು ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇಂದಿಗೂ ಗ್ರಾಮೀಣ ಭಾಗದ ಜನರಲ್ಲಿ ಕರೊನಾ ಪರೀಕ್ಷೆಯ ಬಗ್ಗೆ ಭಯವಿದೆ. ಮನೆಮನೆಗೆ ತೆರಳಿ ಕರೊನಾ ಪರೀಕ್ಷೆ ಮಾಡುವ ಕಾರ್ಯವಾಗಬೇಕು.
    | ಡಾ ಶಶಿಧರ ಹಟ್ಟಿ, ಹಿರೇಹಾಳ ಗ್ರಾಮದ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts