More

    ‘ವೈದ್ಯಭೂಷಣ ಡಾ. ಬಿ.ಎಂ. ಹೆಗ್ಡೆ’ ಕೃತಿ ಲೋಕಾರ್ಪಣೆ

    ಬೆಳಗಾವಿ: ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವತಿಯಿಂದ ಮಾ. 7ರಂದು ಬೆಳಗ್ಗೆ 10:30ಕ್ಕೆ ಸಾಹಿತಿ ಕಲಾ ಭಾಗ್ವತ ವಿರಚಿತ ‘ವೈದ್ಯಭೂಷಣ ಡಾ. ಬಿ.ಎಂ. ಹೆಗ್ಡೆ’ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.

    ಆನ್‌ಲೈನ್ ಮೂಲಕ ಏಕಕಾಲದಲ್ಲಿ ಮುಂಬಯಿ, ಮಂಗಳೂರು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಲಿದೆ. ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ವಿಶೇಷ ಉಪಸ್ಥಿತಿಯಲ್ಲಿ, ಮುಂಬಯಿಯಲ್ಲಿ ಹಿರಿಯ ವಿಜ್ಞಾನಿ ಡಾ. ವ್ಯಾಸರಾವ್ ನಿಂಜೂರು ಹಾಗೂ ಮಂಗಳೂರಿನಲ್ಲಿ ಹಿರಿಯ ವೈದ್ಯ ಡಾ. ಬಿ.ಎಂ. ಹೆಗ್ಡೆ ಅವರು ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.

    ಕಲಾ ಭಾಗ್ವತ ಅವರ ‘ಎಂಎ ಶೋಧ ಸಂಪ್ರಬಂಧ ಕೃತಿ’ ಇದಾಗಿದ್ದು, 188 ಪುಟದ ಈ ಪುಸ್ತಕವನ್ನು ಬೆಂಗಳೂರಿನ ಸ್ನೇಹ ಪ್ರಕಾಶನ ಮುದ್ರಿಸಿದೆ. ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಶುಭಾಶಂಸನೆ ಬರೆದಿರುವುದು ವಿಶೇಷ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬಯಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್ ಉಪಾಧ್ಯ ವಹಿಸಲಿದ್ದು, ಕೃತಿಯ ಕುರಿತು ಕನ್ನಡ ವಿಭಾಗದ ಅತಿಥಿ ಪ್ರಾಧ್ಯಾಪಕಿ ಡಾ. ಉಮಾ ರಾಮರಾವ್ ಮಾತನಾಡಲಿದ್ದಾರೆ. ವಿದ್ಯಾರ್ಥಿ ಮಿತ್ರರಾದ ನಳಿನಾ ಪ್ರಸಾದ ಹಾಗೂ ಶಶಿಕಲಾ ಹೆಗಡೆ ಸಂದೇಶ ವಾಚನ ಮಾಡಲಿದ್ದಾರೆ.

    ಕಲಾ ಭಾಗ್ವತ ಚೊಚ್ಚಲ ಪುಸ್ತಕ: ಯುವ ಸಾಹಿತಿ ಕಲಾ ಭಾಗ್ವತ ಇವರ ಚೊಚ್ಚಲ ಕೃತಿ ಇದು. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ನಾಗತೀರ್ಥ (ಕಡೇಕೋಡಿ) ಗ್ರಾಮದ ಚಿದಾನಂದ ಕೆ. ಭಾಗ್ವತ ಇವರ ಪತ್ನಿಯಾದ ಕಲಾ, ಸದ್ಯ ಮುಂಬಯಿಯಲ್ಲಿ ನೆಲೆಸಿದ್ದಾರೆ. ಇಲ್ಲಿಯ ಉದಯೋನ್ಮುಖ ಲೇಖಕರಲ್ಲಿ ಎದ್ದು ಕಾಣುವ ಹೆಸರು ಇವರದ್ದು. ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ ಗಳಿಸಿದ್ದರೂ ಕನ್ನಡದ ಉತ್ಕಟ ಸಾಹಿತ್ಯಾಭಿಮಾನಿ. ಮುಂಬಯಿ ವಿವಿಯಲ್ಲಿ ಕನ್ನಡ ಎಂಎ ಅಧ್ಯಯನ ಮಾಡುತ್ತಿರುವ ಅವರು, ಗಮಕ ಹಾಗೂ ಸಂಗೀತ ಕ್ಷೇತ್ರದಲ್ಲೂ ಹೆಸರು ಮಾಡುತ್ತಿದ್ದಾರೆ. ಮುಂಬಯಿ ಸೇರಿದಂತೆ ಅನೇಕ ಕಡೆ ಕಾರ್ಯಕ್ರಮ ನೀಡಿ ಜನಮನ್ನಣೆ ಗಳಿಸಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಕವನ, ಕಥೆ, ಬಿಡಿ ಬರಹಗಳು ಪ್ರಕಟಗೊಂಡಿವೆ.

    ಪುಸ್ತಕದಲ್ಲೇನಿದೆ?: ಈ ಕೃತಿಯಲ್ಲಿ ಒಟ್ಟು ಹನ್ನೆರಡು ಪ್ರಮುಖ ಅಧ್ಯಾಯ ಹಾಗೂ ಉಪ ಅಧ್ಯಾಯಗಳಲ್ಲಿ ಡಾ. ಬಿ.ಎಂ. ಹೆಗ್ಡೆ ಯಶೋಗಾಥೆ ಮೂಡಿಬಂದಿದೆ. ಈ ಲೋಕಕ್ಕೆ ಚಿರಪರಿಚಿತರಾದ, ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಅಸಾಮಾನ್ಯರೆನಿಸಿಕೊಂಡ ಅಂತಾರಾಷ್ಟ್ರೀಯ ಕೀರ್ತಿ ಹೊಂದಿರುವ ಅವರ ವ್ಯಕ್ತಿತ್ವದ ಸಮಗ್ರ ದರ್ಶನ ಇದೆ. ಅವರ ಸಾರ್ಥಕ ಜೀವನದ ವಿಶಿಷ್ಟವಾದ ಹೆಜ್ಜೆಗುರುತು ದಾಖಲಿಸುವ ಈ ಕೃತಿಯು ಯುವಪೀಳಿಗೆಗೆ ಹಾಗೂ ಸಾಹಿತ್ಯಾಸಕ್ತರಿಗೆ ಉಪಯುಕ್ತವಾಗುವಂತಿದೆ.

    ನಾಡಿನ ಹೆಮ್ಮೆಯ ಹೆಸರಾಂತ ವೈದ್ಯ ಡಾ. ಬೆಳ್ಳೆ

    ‘ವೈದ್ಯ ಭೂಷಣ ಡಾ. ಬಿ.ಎಂ. ಹೆಗ್ಡೆ’ ಈ ಪುಸ್ತಕವು ನಮ್ಮ ನಾಡಿನ ಹೆಮ್ಮೆಯ ಹಾಗೂ ಹೆಸರಾಂತ ವೈದ್ಯ ಡಾ. ಬೆಳ್ಳೆ ಮೋನಪ್ಪ ಹೆಗ್ಡೆ ಅವರ ‘ಸಿದ್ಧಿ ಸಾಧನೆ’ ಬಿಂಬಿಸುವ ಕೃತಿ. ಡಾ.ಹೆಗ್ಡೆಯವರು ಲಕ್ನೋ ವಿವಿಯಲ್ಲಿ ಎಂ.ಡಿ. ಪದವಿ ಗಳಿಸಿದ್ದು, ಹಾರ್ವರ್ಡ್ ವೈದ್ಯಕೀಯ ವಿಶ್ವದ್ಯಾನಿಲಯದಲ್ಲಿ (ನೊಬೆಲ್ ಪ್ರಶಸ್ತಿ ಪುರಸ್ಕೃತ ಡಾ. ಬರ್ನಾರ್ಡ್ ಲಾಂಗ್ ಅವರ ಮಾರ್ಗದರ್ಶನದಲ್ಲಿ) ಹೃದಯಶಾಸದ ಸಮಗ್ರ ತರಬೇತಿ ಪಡೆದು ಭಾರತಕ್ಕೆ ಮರಳಿದರು. ಮಂಗಳೂರಿನಲ್ಲಿ ರೋಗಿಗಳ ಸೇವೆಗೈದು ಮನೆಮಾತಾದರು. ಬಳಿಕ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯರಾಗಿ, ಮಣಿಪಾಲ್ ಅಕಾಡೆಮಿ ಆ್ ಹೈಯರ್ ಎಜುಕೇಶನ್ (ಡೀಮ್ಡ್ ವಿ.ವಿ)ನ ಉಪಕುಲಪತಿಯಾಗಿ, ಶಿಕ್ಷಣ ತಜ್ಞರಾಗಿ ಸೇವೆ ಸಲ್ಲಿಸಿದವರು. ಅವರು ತಮ್ಮಲ್ಲಿಗೆ ಬರುವ ರೋಗಿಗಳನ್ನಷ್ಟೇ ಅಲ್ಲ, ಸಮಸ್ತ ಜನ ಸಮುದಾಯವನ್ನು ಆರೋಗ್ಯವಾಗಿಡಲು ಶ್ರಮಿಸುತ್ತಿರುವ ವ್ಯಕ್ತಿ, ಶಕ್ತಿ. ಬಹುಭಾಷಾ ಸಂವೇದನೆಯುಳ್ಳ ವೈದ್ಯರು. ತಮ್ಮ ಅಸಾಧಾರಣ ವಾಕ್ಪಟುತ್ವದಿಂದ ಜನರಿಗೆ ತಿಳಿವಳಿಕೆ ನೀಡುವಲ್ಲಿ ಕಾರ್ಯ ನಿರತರಾಗಿದ್ದಾರೆ. ವೈದ್ಯ ವಿಜ್ಞಾನಿಯಾಗಿ ಅನೇಕ ನೊಬೆಲ್ ಲಾರೆನ್ಸ್ ಗಳೊಂದಿಗೆ ಸಂಶೋಧನೆ ನಡೆಸಿ, ಔಷಧ ಲೋಕದಲ್ಲಿ ಕ್ರಾಂತಿ ಮಾಡಿದ ಕೀರ್ತಿ ಇವರದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts