ಹಣಗೆರೆಯಲ್ಲಿ ತಹಸೀಲ್ದಾರ್‌ಗೆ ಗ್ರಾಮಸ್ಥರ ಘೇರಾವ್: ದೇವಸ್ಥಾನದ ಹುಂಡಿ ಹಣ ಎಣಿಕೆಗೆ ವಿರೋಧ

TTH WEB
Published on

ತೀರ್ಥಹಳ್ಳಿ: ದೇವಸ್ಥಾನದ ಹಣ ಬೇಕು, ಆದರೆ ಅಭಿವೃದ್ಧಿ ಮಾತ್ರ ಬೇಡ. ಭಕ್ತಾದಿಗಳಿಗೆ ಸರಿಯಾದ ವಸತಿ, ಮೂಲ ಸೌಕರ್ಯ ಕಲ್ಪಿಸಿಲ್ಲ. ಗ್ರಾಮಸ್ಥರ ಮನವಿಗೂ ಬೆಲೆ ಕೊಡುತ್ತಿಲ್ಲ. ಯಾವ ಕಾರಣಕ್ಕೂ ಹುಂಡಿ ಕಾಣಿಕೆ ಎಣಿಸಲು ಬಿಡುವುದಿಲ್ಲ...

ತಾಲೂಕಿನ ಹಿಂದು-ಮುಸ್ಲಿಂ ಭಾವೈಕ್ಯ ಕೇಂದ್ರ ಶ್ರೀ ಭೂತರಾಯ ಚೌಡೇಶ್ವರಿ ಹಾಗೂ ಸೈಯದ್ ಸಾದತ್ ದರ್ಗಾದ ಭಕ್ತರು ಹಾಗೂ ಹಣಗೆರೆ ಗ್ರಾಮಸ್ಥರು ಗುರುವಾರ ಮುಜರಾಯಿ ದೇವಸ್ಥಾನದ ಹುಂಡಿ ಕಾಣಿಕೆ ಎಣಿಕೆಗೆ ಆಗಮಿಸಿದ್ದ ತಹಸೀಲ್ದಾರ್ ಅಮೃತ್ ಅತ್ರೇಶ್‌ಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

2 ಕೋಟಿ ರೂ. ವೆಚ್ಚದಲ್ಲಿ ಉದ್ಘಾಟನೆಯಾದ ಕಟ್ಟಡ ಉಪಯೋಗಕ್ಕೆ ಲಭ್ಯವಾಗಿಲ್ಲ. ಗ್ರಾಮದಲ್ಲಿ ಕಳ್ಳತನ, ಗಲಾಟೆಗಳು ನಡೆಯುತ್ತಿದ್ದು ಪೊಲೀಸ್ ಚೌಕಿ ಅಗತ್ಯವಿದೆ. ಪೊಲೀಸರ ಸೋಗಿನಲ್ಲಿ ಆಗಮಿಸುವವರು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇಂತಹ ಅನಧಿಕೃತ ವ್ಯಕ್ತಿಗಳು ದೇವಸ್ಥಾನದ ಆವರಣದಲ್ಲೂ ಕಾರ್ಯನಿರ್ವಹಿಸುತ್ತಿದ್ದು ಆಡಳಿತ ಎಚ್ಚರಿಕೆ ವಹಿಸುತ್ತಿಲ್ಲ ಎಂದು ದೂರಿದರು.

ಮಹಿಳೆಯರು, ಮಕ್ಕಳಿಗೆ ಅವಶ್ಯವಾಗಿರುವ ಶೌಚಗೃಹ ವ್ಯವಸ್ಥೆ ಇಲ್ಲ. ಕುಡಿಯುವ ನೀರು ಸಿಗುವುದಿಲ್ಲ. ಪಾರ್ಕಿಂಗ್ ಸೌಲಭ್ಯವಿಲ್ಲದೆ ರಸ್ತೆಯ ಎಲ್ಲೆಂದರಲ್ಲಿ ವಾಹನ ನಿಲುಗಡೆಯಾಗುತ್ತಿದೆ. ದೇವಸ್ಥಾನದ ಮುಂಭಾಗದ ಪುಷ್ಕರಿಣಿ ಸ್ವಚ್ಛಗೊಳಿಸುತ್ತಿಲ್ಲ. ಚಪ್ಪಲಿ ಸ್ಟಾಂಡ್, ಸರತಿ ಸಾಲಿನಲ್ಲಿ ಹೋಗಿ ಬರುವ ವ್ಯವಸ್ಥೆಗಳಿಲ್ಲ ಎಂದು ಆರೋಪಿಸಿದರು.

ಸತತ ಎರಡು ಗಂಟೆಗಳ ಕಾಲ ವಾಗ್ವಾದದ ನಂತರ ತಹಸೀಲ್ದಾರ್ 10 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಹುಂಡಿ ಹಣ ಎಣಿಕೆಗೆ ಅವಕಾಶ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net