ಸಾಹಿತಿ ಎಚ್.ಚಂದ್ರಪ್ಪ ಸಾಹಿತ್ಯ ಸೇವೆ ಅನನ್ಯ

TKE sanmana
ತರೀಕೆರೆಯಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ. ಎಚ್.ಎಸ್.ಸತ್ಯನಾರಾಯಣ ಅವರಿಗೆ ಚಂದ್ರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿ.ಎನ್.ಚಂದ್ರಪ್ಪ, ಸೂರಿ ಶ್ರೀನಿವಾಸ್, ಇಮ್ರಾನ್ ಅಹಮದ್ ಬೇಗ್, ರವಿ ದಳವಾಯಿ ಬಿ.ಎಸ್.ಭಗವಾನ್ ಇತರರಿದ್ದರು.
Published on

ತರೀಕೆರೆ: ಸಾಹಿತಿ ಎಚ್.ಚಂದ್ರಪ್ಪ ಅವರ ಹೆಸರನ್ನು ಪಟ್ಟಣದ ರಸ್ತೆಗೆ ನಾಮಕರಣ ಮಾಡಿರುವುದು ಅವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯನ್ನು ತೋರಿಸುತ್ತಿದೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.

ಪಟ್ಟಣದ ತುಂಗ-ಭದ್ರಾ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ಚಂದ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಒಳ್ಳೆಯ ಕಾರ್ಯಗಳು, ನಿಸ್ವಾರ್ಥ ಕೆಲಸ ಮಾಡುವವರು ಜನಮಾನಸದಲ್ಲಿ ಸದಾ ಜೀವಂತವಾಗಿರುತ್ತಾರೆ. ಸಾಹಿತಿ ಎಚ್.ಚಂದ್ರಪ್ಪ ಸಮಾಜಕ್ಕೆ ಕೊಡುಗೆಗಳನ್ನು ನೀಡಿದ್ದು, ಸಾಕಷ್ಟು ಯುವ ಬರಹಗಾರರನ್ನು ಮುನ್ನೆಲೆಗೆ ತಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರ ಸಾಹಿತ್ಯಾಸಕ್ತಿ, ಜೀವನೋತ್ಸಾಹ ಈಗಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸಾಹಿತಿ ಎಚ್.ಚಂದ್ರಪ್ಪ ಕುಟುಂಬಸ್ಥರು ಅವರ ಹೆಸರಲ್ಲಿ ದತ್ತಿ ಆರಂಭಿಸಿ, ಪ್ರತಿ ಹಂತದಲ್ಲೂ ಅವರನ್ನು ಜೀವಂತಗೊಳಿಸುವ ಪ್ರಯತ್ನ ಮಾಡಿದ್ದಾರೆ. ದತ್ತಿ ಉಪನ್ಯಾಸದಿಂದ ಸಾಹಿತ್ಯಾಸಕ್ತರಿಗೆ ಅನುಕೂಲವಾಗುವುದಲ್ಲದೆ ಕಸಾಪ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಹೇಳಿದರು.

ತಾಲೂಕು ಕಸಾಪ ಗೌರವಾಧ್ಯಕ್ಷ ಬಿ.ಎಸ್.ಭಗವಾನ್ ಮಾತನಾಡಿ, ಬಹುಮುಖ ಪ್ರತಿಭೆಯಾಗಿದ್ದ ಸಾಹಿತಿ ಎಚ್.ಚಂದ್ರಪ್ಪ ಅವರಲ್ಲಿ ದೈತ್ಯ ಶಕ್ತಿ ಅಡಗಿತ್ತು. ಅವರ ಕ್ರಿಯಾಶೀಲತೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು. ವಿಮರ್ಶಕ ಡಾ. ಎಚ್.ಎಸ್.ಸತ್ಯನಾರಾಯಣ ಅವರಿಗೆ ಚಂದ್ರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಸಾಪ ಜಿಲ್ಲಾ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ಜಿಲ್ಲಾ ಮಹಿಳಾ ಘಟಕದ ಕೋಶಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಪ್ರಧಾನ ಕಾರ್ಯದರ್ಶಿ ತ.ಮ.ದೇವಾನಂದ, ಮಹಿಳಾ ಘಟಕ ಅಧ್ಯಕ್ಷೆ ಸುನೀತಾ, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಉಪನ್ಯಾಸಕ ಎ.ದಾದಾಪೀರ್, ಪ್ರಮುಖರಾದ ಡಾ. ಮರುಳಸಿದ್ದಯ್ಯ ಪಟೇಲ್, ಆರಾಧನಾ, ಪದ್ಮಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net