ಸಾಧನೆಗೆ ಯಾವುದೇ ಅಡ್ಡದಾರಿ ಇಲ್ಲ

26
Published on

ಪ್ರೇರಣಾ ಉಪನ್ಯಾಸ, ಸಂವಾದದಲ್ಲಿ ಇನ್ಫೋಸಿಸ್​ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿಕೆ

ತುಮಕೂರು: ಸ್ವಾತಂತ್ರ$್ಯ ಬಂದು ಇಷ್ಟು ವರ್ಷಗಳಾದರೂ ದೇಶವು ಅತ್ಯಂತ ಕಡುಬಡತನದ ಬೇಗೆಯಲ್ಲಿ ಇನ್ನೂ ಬೇಯುತ್ತಿದೆ. ಶೇ.60 ಜನ ಒಪ್ಪೊತ್ತಿನ ಊಟಕ್ಕೂ ಕಷ್ಟ ಪಡುವ ಗಂಭೀರ ಸ್ಥಿತಿ ನಮ್ಮಲ್ಲಿದೆ. ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ನಮ್ಮ ಮುಂದಿರುವ ಭರವಸೆ ಯುವಜನತೆ ಮಾತ್ರ ಎಂದು ಇನ್ಫೋಸಿಸ್​ ಸಂಸ್ಥಾಪಕ ಎನ್​.ಆರ್​.ನಾರಾಯಣಮೂರ್ತಿ ಹೇಳಿದರು.

ನಗರದ ವಿಶ್ವವಿದ್ಯಾಲಯದಿಂದ ಶನಿವಾರ ಆಯೋಜಿಸಿದ್ದ ಪ್ರೇರಣಾ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ದೇಶದಲ್ಲಿ 80 ಕೋಟಿ ಜನಕ್ಕೆ ಉಚಿತ ಪಡಿತರವನ್ನು ಸರ್ಕಾರವೇ ಒದಗಿಸುತ್ತಿದ್ದು, ಇದು ವಾಸ್ತವ ಮತ್ತು ಸತ್ಯಸಂಗತಿ. ಇದರ ಜತೆಗೆ ಉಚಿತ ವಿದ್ಯುತ್​, ಉಚಿತ ಬಸ್​ಪಾಸ್​ ಸಹ ನೀಡಲಾಗುತ್ತಿದ್ದು, ಬಡತನ ನಿಮೂರ್ಲನೆ ಮಾಡಲಾಗಿಲ್ಲ. ಸರ್ಕಾರ ನೀಡುತ್ತಿರುವ ಉಚಿತ ಸೌಲಭ್ಯಗಳಿಗೆ ನನ್ನ ವಿರೋಧವಿಲ್ಲ. ಅದನ್ನು ಟೀಕಿಸುವುದಿಲ್ಲ. ಆದರೆ, 77 ವರ್ಷಗಳಿಂದ ನಾವೇನು ಮಾಡಿದ್ದೇವೆ ಎಂಬುದು ನನ್ನನ್ನು ಕಾಡುತ್ತಿದ್ದು, ಇದಕ್ಕೆ ಏಕೈಕ ಪರಿಹಾರ ಯುವಜನತೆ ಎಂದರು.

ರಾಷ್ಟ್ರ ಎದುರಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ನಾನು ಸೇರಿ ಎಲ್ಲ ಹಿರಿಯರು ಸೋತಿದ್ದೇವೆ. ದೇಶ ಕಟ್ಟುವ ಗುರುತರ ಜವಾಬ್ದಾರಿ ಯುವಜನತೆಯ ಮೇಲಿದ್ದು, ಕಠಿಣ ಪರಿಶ್ರಮವೇ ದೇಶದ ಅಭಿವೃದ್ಧಿಗೆ ಮೂಲಾಧಾರ. ಹಾಗಾಗಿ, ಪರಿಶ್ರಮ, ಪ್ರಾಮಾಣಿಕತೆಯಿಂದ ದುಡಿದು ಬಡತನ ನಿಮೂರ್ಲನೆಗೆ ಕೈಜೋಡಿಸಬೇಕು. ಯಾವ ಕ್ಷೇತ್ರವನ್ನು ನೀವು ಆಯ್ಕೆ ಮಾಡಿಕೊಳ್ಳುತ್ತೀರೋ ಆ ಕ್ಷೇತ್ರದಲ್ಲಿ ಸಮರ್ಪಣಾ ಭಾವದಿಂದ ದುಡಿಯಿರಿ. ಎತ್ತರಕ್ಕೆ ಬೆಳೆಯಲು ಕಷ್ಟಪಟ್ಟ ದುಡಿಯುವುದೊಂದೇ ದಾರಿ. ಯಾವುದೇ ಅಡ್ಡದಾರಿಗಳು ಯಶಸ್ಸಿಗಿಲ್ಲ ಎಂದು ತಿಳಿಸಿದರು.

ನಾಯಕತ್ವ ಗುಣವನ್ನು ಸಮಾಜವು ಗೌರವಿಸುತ್ತದೆ. ಶಿಕ್ಷಣ ಜತೆಗೆ ಉತ್ತಮ ಮೌಲ್ಯಗಳು, ಪ್ರಾಮಾಣಿಕತೆಯಿಂದ ಉತ್ತಮ ನಾಯಕನಾಗಿ ರೂಪುಗೊಳ್ಳಬಹುದು. ಶಿಕ್ಷಣದಿಂದ ಉದ್ಯೋಗವನ್ನು ಪಡೆಯಬಹುದಾಗಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಡುವ ಮೂಲಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಬಡತನ, ಪೌಷ್ಟಿಕತೆ, ಶಿಕ್ಷಣ, ಆರೋಗ್ಯ, ವಸತಿ ಹೀಗೆ ಯಾವುದೇ ಸೂಚ್ಯಂಕಗಳ ಅಂಕಿಅಂಶಗಳನ್ನು ನೋಡಿದಾಗ ದೇಶದ

ಸೂಚ್ಯಂಕ ಕಡಿಮೆ ಇದೆ. ಬಡತನ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿನ ಅಸಮಾನತೆ ತೊಡೆದುಹಾಕುವ ಮೂಲಕ ಎಲ್ಲರಿಗೂ ಬದುಕು ರೂಪಿಸಿಕೊಳ್ಳುವ ಅವಕಾಶ ಸೃಷ್ಟಿಸಿಕೊಡಬೇಕು. ದೇಶದ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಸರ್ಕಾರಗಳು ಕಲ್ಪಿಸಿಕೊಡಬೇಕು

ಎಂದು ಅಭಿಪ್ರಾಯಪಟ್ಟರು. ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಶ್ರೀ ಜಪಾನಂದ ಸ್ವಾಮೀಜಿ, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವೆ ನಾಹಿದ ಜಮ್​ಜಮ್​, ಪರೀಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್​, ಪ್ರೇರಣಾ ಉಪನ್ಯಾಸ ಸಮಿತಿ ಅಧ್ಯಕ್ಷ ಪೊ.ಬಿ.ರವೀಂದ್ರಕುಮಾರ್​, ಕೌಶಲಾಭಿವೃದ್ಧಿ ಕೇಂದ್ರದ ಸಂಚಾಲಕ ಪೊ.ಕೆ.ಜಿ.ಪರಶುರಾಮ್​ ಉಪಸ್ಥಿತರಿದ್ದರು.

ನಾನು ತುಮಕೂರಿನವನೇ...: ನಮ್ಮ ತಂದೆ 1941ರಿಂದ 1952 ರವರೆಗೆ ಹೈಸ್ಕೂಲ್​ ಶಿಕ್ಷಕರು, ಇನ್​ಸ್ಪೆಪೆಕ್ಟರ್​ ಸ್ಕೂಲ್ಸ್​ ಆಗಿದ್ದರು. ನಂತರ ಮಧುಗಿರಿ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರಾಗಿದ್ದರು. ನನ್ನ ದೊಡ್ಡಪ್ಪ 1941ರಿಂದ 45ರವರೆಗೆ ಡೆಪ್ಯೂಟಿ ಕಮಿಷನರ್​ ಆಗಿದ್ದರು. ತುಮಕೂರು ನನಗೆ ಹೊಸದೇನಲ್ಲ. ಇಲ್ಲಿ ಬಹಳ ಸ್ನೇಹಿತರು ನನಗಿದ್ದಾರೆಂದು ತುಮಕೂರಿನ ಜತೆಗಿನ ನಂಟನ್ನು ನಾರಾಯಣಮೂರ್ತಿ ಬಿಚ್ಚಿಟ್ಟರು.

ಸಮಯ ಪರಿಪಾಲನೆ : ಇನ್ಫೋಸಿಸ್​ ಸಂಸ್ಥಾಪಕ ಎನ್​.ಆರ್​. ನಾರಾಯಣಮೂರ್ತಿ ಸಮಯಕ್ಕೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದನ್ನು ನಿರೂಪಿಸಿದರು. ಒಂದೂವರೆ ಗಂಟೆ ಕಾರ್ಯಕ್ರಮಕ್ಕೆ ಕಾಲಾವಕಾಶ ನೀಡಿದ್ದ ಮೂರ್ತಿ ಅವರು, ಪ್ರೇರಣಾ ಉಪನ್ಯಾಸದ ಬಳಿಕ ವಿದ್ಯಾರ್ಥಿಗಳ ಪರವಾಗಿ ಕುಲಪತಿ ಪ್ರೊ.ವೆಂಕಟೇಶ್ವರಲು ಕೇಳಿದ ಪ್ರಶ್ನೆಗಳಿಗೆಲ್ಲ ಸಾವಧಾನವಾಗಿ ಉತ್ತರಿಸಿದರು. ಆ ನಂತರ ಕುಲಪತಿಗಳು ಅಧ್ಯಯ ಭಾಷಣ ಮಾಡುತ್ತಿರುವಾಗಲೇ ಸಮಯ 12.30 ಆಗುತ್ತಿದ್ದಂತೆ ಕ್ಷಣವೂ ಕಾಯದೆ ವೇದಿಕೆಯಿಂದ ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net