ಸರ್ಕಾರಿ ಶಾಲೆಯಲ್ಲೇ ಗುಣಮಟ್ಟ ಶಿಕ್ಷಣ ಲಭ್ಯ

sri school
ಶೃಂಗೇರಿ ವಿದ್ಯಾನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ ಉದ್ಘಾಟಿಸಿದರು. ಶ್ರೀಶ, ಆನಂದಸ್ವಾಮಿ, ಸಿದ್ದರಾಜು ಇತರರಿದ್ದರು.
Published on

ಶೃಂಗೇರಿ: ಸರ್ಕಾರಿ ಶಾಲೆಯಲ್ಲಿ ಹೆಚ್ಚು ಫಲಿತಾಂಶ ಮತ್ತು ಅತಿ ಹೆಚ್ಚು ಅಂಕ ಗಳಿಸಲು ಸಾಧ್ಯ ಎಂಬುದು ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸಾಬೀತುಮಾಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವರಲಕ್ಷ್ಮೀ ಹೇಳಿದರು.

ವಿದ್ಯಾನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶನಿವಾರ ಏರ್ಪಡಿಸಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಯ ವಿದ್ಯಾರ್ಥಿನಿ ದೃಣ್ಯ ಶೆಟ್ಟಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸರ್ಕಾರಿ ಶಾಲೆಯಲ್ಲಿ ತಜ್ಞ ಶಿಕ್ಷಕರು, ಸೌಲಭ್ಯ ವಿದ್ಯಾರ್ಥಿಗಳಿಗೆ ದೊರಕಲಿದೆ. ಮಧ್ಯಾಹ್ನದ ಬಿಸಿಯೂಟ, ಕ್ಷೀರ ಭಾಗ್ಯ, ಉಚಿತ ಶಿಕ್ಷಣ ದೊರಕುತ್ತಿದ್ದು, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣಕುಮಾರ್ ಮಾತನಾಡಿ, ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲೂ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಸರ್ಕಾರ ಅಗತ್ಯ ಸವಲತ್ತು ನೀಡುತ್ತಿದ್ದು, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಿದೆ. ಇರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ವೈಕುಂಠಪುರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಈಶ್ವರ್ ಮಾತನಾಡಿ, ಬಹುತೇಕ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗುತ್ತಿದ್ದರೂ, ನಮ್ಮ ಶಾಲೆಯಲ್ಲಿ ಆರಂಭದಿಂದ ಸರಾಸರಿ ವಿದ್ಯಾರ್ಥಿಗಳು ಇದ್ದಾರೆ. ಐದು ವರ್ಷದ ಹಿಂದೆ ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಫಲಿತಾಂಶ ಪಡೆದಿದ್ದು, ನಂತರ ಶಿಕ್ಷಕರು ಮತ್ತು ಪಾಲಕರು ಸವಾಲಾಗಿ ಸ್ವೀಕರಿಸಿ ಪ್ರತಿ ವರ್ಷ ಉತ್ತಮ ಫಲಿತಾಂಶ ಪಡೆಯಲಾಗುತ್ತಿದೆ ಎಂದರು.

ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ, ಆನಂದಸ್ವಾಮಿ, ಶಾರದಮ್ಮ, ಸಿದ್ದರಾಜು, ಗಂಗಾಧರಪ್ಪ, ದಿನೇಶ್, ಸುಂದರೇಶ್, ಶ್ರೀಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net