ಸನಾತನ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನ : ಸಣ್ಣ ನಿರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಮತ

05arsph2ep
Published on



ಹಾಸನ : ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನವಿದೆ ಎಂದು ಸಣ್ಣ ನಿರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಅರಸೀಕೆರೆ ತಾಲೂಕಿನ ಶಶಿವಾಳ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚಿತ್ತರಗಿ ಪರಮತಪಸ್ವಿ ಲಿಂಗೈಕ್ಯ ಶ್ರೀ ವಿಜಯ ಮಹಾಂತ ಶಿವಯೋಗಿಗಳು ಹಾಗೂ ಶ್ರೀ ಗಂಗಾಧರ ರಾಜಯೋಗೀಂದ್ರ ಶ್ರೀಗಳ 20 ನೇ ವರ್ಷದ ಪುಣ್ಯ ಸ್ಮರಣೆ ಮತ್ತು ಶರಣ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಬದಲಾದ ವಿದ್ಯಮಾನದಲ್ಲಿ ಶರಣರ ಸಂಸ್ಕೃತಿ, ಆಚಾರ-ವಿಚಾರಗಳು ವಿಮರ್ಶೆಗೆ ಒಳಪಡುತ್ತಿವೆ. ಮುಂದಿನ ಪೀಳಿಗೆಗೆ ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯಬಾರದು. ಗುರುವಿನ ಆಶೀರ್ವಾದದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಹರ ಮುನಿದರೂ ಗುರು ಕಾಯುವನು ಎಂಬ ಭಕ್ತರ ನಂಬಿಕೆ ಪ್ರಶ್ನಾತೀತವಾದುದು ಎಂದು ಮಠ ಮಾನ್ಯಗಳ ಕೊಡುಗೆಯನ್ನು ಕೊಂಡಾಡಿದರು.


ತಿಪಟೂರು ಷಡಾಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಮಠ-ಮಂದಿರಗಳು ಭಕ್ತರ ಆಧ್ಯಾತ್ಮಿಕ ತಾಣಗಳಾಗಿವೆ. ಗುರು ಮತ್ತು ಶಿಷ್ಯರ ಬಾಂಧವ್ಯದ ಬೆಸುಗೆಯನ್ನು ಯಾರಿಂದಲೂ ಅಳಿಸಲಾಗದು. ಇಂದಿನ ಯುವ ಜನತೆ ಆಧುನಿಕ ಜೀವನ ಶೈಲಿಗೆ ಮಾರು ಹೋಗುತ್ತಿದ್ದು, ದೈವದ ಅಸ್ತಿತ್ವವನ್ನೇ ಪ್ರಶ್ನಿಸುವ ಹಂತಕ್ಕೆ ಬೆಳೆದಿರುವುದು ಕಳವಳಕಾರಿ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.


ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಶಾಂತಿ ಹಾಗೂ ನೆಮ್ಮದಿಯೊಂದಿಗೆ ಭಾವೈಕ್ಯತೆಯಲ್ಲಿ ಬಾಳುತ್ತಿರುವುದಕ್ಕೆ ಧಾರ್ಮಿಕ ಸಂಸ್ಕೃತಿ ಕಾರಣವಾಗಿದೆ. ದೇವರು, ಧರ್ಮ, ತಂದೆ, ತಾಯಿ, ಗುರು ಹಿರಿಯರು ಎನ್ನುವಂತಹ ಪೂಜ್ಯಭಾವನೆ, ಉತ್ತಮ ಸಂಸ್ಕಾರವನ್ನು ಪಡೆದು ಜೀವನದ ಸಾರ್ಥಕತೆ ಕಾಣುವಂತಾಗಿದೆ ಎಂದರು.

ಡಿ.ಎಂ.ಕುರ್ಕೆ ಬೂದಿಹಾಳ್ ವಿರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಮಾಡಾಳು ಸ್ವಾಮಿ, ರಾಂಪುರ ಗ್ರಾಪಂ ಅಧ್ಯಕ್ಷ ಕರುಣಾಕರಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net