ಶಾಲಾ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ಆರೋಪ

17 ckm 6 ravi
ಶಾಲೆಯ ಪೋಷಕರ ನಿರ್ವಹಣಾ ಸಮಿತಿ ಅಧ್ಯಕ್ಷ ರವಿ
Published on

ಚಿಕ್ಕಮಗಳೂರು: ನಗರದ ಹೊರವಲಯದಲ್ಲಿರುವ ಬೀಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅತಿಕ್ರಮ ಪ್ರವೇಶ ಮಾಡಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ದಲಿತ ಸಂಘಟನೆ ಮುಖಂಡರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಲೆಯ ಪೋಷಕರ ನಿರ್ವಹಣಾ ಸಮಿತಿ ಅಧ್ಯಕ್ಷ ರವಿ ಒತ್ತಾಯಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಂಘಟನೆಗಳ ಮುಖಂಡರುಗಳು ಇತ್ತೀಚೆಗೆ ಶಾಲೆಗೆ ಅತಿಕ್ರಮ ಪ್ರವೇಶ ಮಾಡಿ ಅರ್ಪಿತಾ ಎಂಬುವವರನ್ನು ಮರಳಿ ಅಡುಗೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಪ್ರಾಚಾರ್ಯರ ಮೇಲೆ ಒತ್ತಡ ಹೇರಿದ್ದಾರೆ. ಈ ಸಂಬAಧ ಪ್ರಾಚಾರ್ಯರು ಸಮಜಾಯಿಷಿ ನೀಡಿದರೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.

ಶಾಲೆಗೆ ಪ್ರತ್ಯೇಕ ವಾರ್ಡನ್ ವ್ಯವಸ್ಥೆ ಮಾಡಬೇಕು. ಪ್ರಸ್ತುತ ಇರುವ ಅಡುಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ದಲಿತ ಮುಖಂಡರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಶೃತಿ ಎಂಬುವವರು ವೈದ್ಯಕೀಯ ಸೇವೆಗೆ ಮಾತ್ರ ಸೀಮಿತರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿದರು.

ಈ ಎಲ್ಲ ಘಟನೆಗಳಿಗೆ ಶಾಲೆಯಲ್ಲಿ ಖಾಯಂ ನಿಲಯ ಪಾಲಕರು ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಈ ಸಂಬAಧ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಶಾಸಕರು, ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಇದನ್ನು ಗಂಭೀರವಾಗಿ ಪರಿಗಣಿಸಿ, ಗಲಭೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ವಹಣಾ ಸಮಿತಿ ಮುಖಂಡರಾದ ಜಯಶ್ರೀ, ದಿವಾಕರ್, ನಿರ್ಮಲಾ, ಕಿರಣ್, ಉಮೇಶ್, ಪ್ರಕಾಶ್, ರಾಧಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net