

ಹುಬ್ಬಳ್ಳಿ: ಅಗತ್ಯ ವಸ್ತುಗಳ ಖರೀದಿಗಾಗಿ ನೀಡಿದ್ದ ವಿನಾಯಿತಿ ಅವಧಿ ಮುಗಿದರೂ ನಗರದಲ್ಲಿ ಶುಕ್ರವಾರ ಸಂಚರಿಸುತ್ತಿದ್ದ ವಾಹನಗಳು ಲಾಕ್ಡೌನ್ ನಿಯಮವನ್ನೇ ಅಣಕಿಸುವಂತೆ ಕಂಡುಬಂತು.
ಲ್ಯಾಮಿಂಗ್ಟನ್ ರಸ್ತೆ, ಚನ್ನಮ್ಮ ವೃತ್ತ, ಗೋಕುಲ ರಸ್ತೆ, ಕಾರವಾರ ರಸ್ತೆ, ಕ್ಲಬ್ ರಸ್ತೆ, ಕುಸುಗಲ್ಲ ರಸ್ತೆ, ಸ್ಟೇಶನ್ ರಸ್ತೆ, ವಿದ್ಯಾನಗರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆಯಿಂದಲೇ ವಾಹನ ಹಾಗೂ ಜನ ಸಂಚಾರ ಸಾಮಾನ್ಯವಾಗಿತ್ತು.
ವಿನಾಯಿತಿ ಅವಧಿ ಮುಗಿದ ಮಧ್ಯಾಹ್ನ 12 ಗಂಟೆ ನಂತರವೂ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಯಥೇಚ್ಛವಾಗಿ ಮುಂದುವರಿದಿದ್ದನ್ನು ಗಮನಿಸಿದರೆ ನಗರದ ನಾಗರಿಕರು ಲಾಕ್ಡೌನ್ ನಿಯಮಗಳನ್ನು ಹಾಡುಹಗಲೇ ಗಾಳಿಗೆ ತೂರಿದಂತಿತ್ತು. ಪಾದಚಾರಿಗಳ ತಿರುಗಾಟವೂ ಮುಂದುವರಿದಿತ್ತು.
ಕಳೆದ 2 ದಿನಗಳಿಂದ ಸುರಿಯುತ್ತಿದ್ದ ಮಳೆ ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆಗೆ ಇಳಿಯುವುದನ್ನು ಒಂದು ಹಂತದ ಮಟ್ಟಕ್ಕೆ ನಿಯಂತ್ರಿಸಿತ್ತು. ಆದರೆ ಲಾಕ್ಡೌನ್ನ 3ನೇ ದಿನವಾದ ಶುಕ್ರವಾರ ಮಧ್ಯಾಹ್ನದವರೆಗೂ ಮಳೆ ಇಲ್ಲದ ಕಾರಣ ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರು.
ಲಾಕ್ಡೌನ್ ಅವಧಿಯಲ್ಲಿ ಸಂಚರಿಸುತ್ತಿದ್ದ ಕೆಲ ಬೈಕ್ ಸವಾರರನ್ನು ಸ್ಟೇಶನ್ ರಸ್ತೆಯಲ್ಲಿ ಪೊಲೀಸರು ವಿಚಾರಿಸಿದಾಗ ಎರಡ್ಮೂರು ವರ್ಷಗಳ ಹಿಂದಿನ ಚೀಟಿ ತೋರಿಸಿ, ಔಷಧ ಅಂಗಡಿಗೆ ತೆರಳುತ್ತಿರುವ ನೆಪ ಹೇಳುತ್ತಿದ್ದುದು ಕಂಡುಬಂದಿತು. ಕೆಲವರನ್ನು ವಾಪಸ್ ಕಳುಹಿಸಿದ ಪೊಲೀಸರು, ಮತ್ತೆ ಬಂದರೆ ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿ ಕಳುಹಿಸಿದರು.