ಲಷ್ಕರ್ ಉಗ್ರರ ದಾಳಿಗೆ ಪ್ರತ್ಯುತ್ತರ ಖಚಿತ

BJP
Published on

ಚಿತ್ರದುರ್ಗ: ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ 26 ಮಂದಿ ಭಾರತೀಯರನ್ನು ಹತ್ಯೆಗೈದ ಉಗ್ರರ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯುತ್ತರ ನೀಡುವುದು ಖಚಿತ ಎಂದು ಎಂಎಲ್ಸಿ ಕೆ.ಎಸ್.ನವೀನ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಕಿಸ್ತಾನ-ಬಾಂಗ್ಲಾ ಬೆಂಬಲಿತ ಲಷ್ಕರ್ ಭಯೋತ್ಪಾದಕರೇ 26 ಮಂದಿ ಹಿಂದುಗಳನ್ನೇ ಟಾರ್ಗೆಟ್ ಮಾಡಿ ಗುಂಡಿಕ್ಕಿ ಕೊಲೆಗೈದಿದ್ದಾರೆ. ಇದನ್ನು ಬಿಜೆಪಿಗರು ಖಂಡಿಸಿದ್ದು, ದೇಶದ ಶಾಂತಿ ಕದಡಲು ಯತ್ನಿಸಿದ ದುಷ್ಟರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಪ್ರಧಾನಿ ಅವರು ವಿದೇಶಿ ಪ್ರವಾಸ ಮೊಟಕುಗೊಳಿಸಿ ದೇಶಕ್ಕೆ ಹಿಂದಿರುಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಶ್ರೀನಗರದಲ್ಲಿದ್ದು, ರಾಜ್ಯದ ಪ್ರತಿನಿಧಿಯಾಗಿ ಸಂಸದ ತೇಜಸ್ವಿ ಸೂರ್ಯ ಕೂಡ ಜೊತೆಯಲ್ಲಿದ್ದಾರೆ. ದುರ್ಘಟನೆಯಲ್ಲಿ ಗಾಯಗೊಂಡ ಕರ್ನಾಟಕದವರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ದಲಿತ ಸಮುದಾಯದವರ ಮನೆಗಳಿಗೆ ನುಗ್ಗಿ ಹಲ್ಲೆ, ಹತ್ಯೆ ಮಾಡುತ್ತಿರುವ ಕುರಿತು ಕಾಂಗ್ರೆಸ್ಸಿಗರು ತುಟಿ ಬಿಚ್ಚುತ್ತಿಲ್ಲ. ಓಲೈಕೆ ರಾಜಕೀಯದಿಂದ ಅವಘಡ ತಪ್ಪಿದ್ದಲ್ಲ ಎಂದು ಹೇಳಿದರು.

ಅವ್ಯವಹಾರದ ತನಿಖೆಯಾಗಲಿ: ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ವೈದ್ಯ ಬೋಧಕರ ನೇಮಕಾತಿಯಲ್ಲಿ ಮಾನದಂಡಗಳನ್ನು ಗಾಳಿಗೆ ತೂರಿದ್ದು, ಲಕ್ಷಾಂತರ ರೂ. ಅವ್ಯವಹಾರ ನಡೆದಿರುವ ಕುರಿತು ತನಿಖೆಯಾಗಬೇಕು. ಎಷ್ಟೇ ಪ್ರಭಾವಿಯಾಗಿದ್ದರೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಭಯೋತ್ಪಾದಕರ ದಾಳಿಗೆ ನಮ್ಮವರು ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ. ಈ ವಿಚಾರದಲ್ಲಿ ದೇಶದ ಯಾವ ಪಕ್ಷಗಳು ರಾಜಕೀಯ ಬಣ್ಣ ಹಚ್ಚಿ, ರಾಜಕಾರಣ ಮಾಡಬಾರದು. ಐಕ್ಯತೆ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಜನಾಕ್ರೋಶ ಯಾತ್ರೆ ಮುಂದೂಡಿಕೆ: ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ ಮಾತನಾಡಿ, ದಾಳಿಯಲ್ಲಿ ಸಾವನ್ನಪ್ಪಿದ ಕರ್ನಾಟಕದ ಇಬ್ಬರ ಮೃತದೇಹಗಳು ರಾಜ್ಯಕ್ಕೆ ಬರುತ್ತಿದ್ದು, ಬಿಜೆಪಿಯಿಂದ ಶೋಕಾಚರಣೆ, ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಚಿತ್ರದುರ್ಗದಲ್ಲಿ ಏ. 25ರಂದು ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆ ಮುಂದೂಡಲಾಗಿದೆ ಎಂದು ತಿಳಿಸಿದರು.

ಪದಾಧಿಕಾರಿಗಳಾದ ಜಿ.ಟಿ.ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ಲೋಕೇಶ್, ನಾಗರಾಜ್, ಮಲ್ಲಿಕಾರ್ಜುನ್, ವೆಂಕಟೇಶ್‌ಯಾದವ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಛಲವಾದಿ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net