

ಹಾಸನ: ಭೂಮಿ ಪ್ಲಾಸ್ಟಿಕ್ ಮಾಲಿನ್ಯದಿಂದ ತತ್ತರಗೊಂಡಿದ್ದು, ಫಲವತ್ತತೆಯನ್ನು ಹಾಳು ಮಾಡಿ ರೋಗ ರುಜಿನಗಳಿಗೆ ಕಾರಣವಾಗಿದೆ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ನಿಟ್ಟೂರು ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರೌಢಶಾಲೆ, ಜಿಪಿಎಲ್‌ಎಫ್ ತಾಲೂಕು ಪಂಚಾಯಿತಿಗಳ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ಲಾಸ್ಟಿಕ್ ಮಾಲಿನ್ಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ಲಾಸ್ಟಿಕ್ ಮಾಲಿನ್ಯದಿಂದ ಮುಕ್ತಿ ಹೊಂದಲು ಇರುವ ಮಾರ್ಗವೆಂದರೆ ಜನಜಾಗೃತಿ ಹಾಗೂ ಪ್ಲಾಸ್ಟಿಕ್ ಮಿತ ಬಳಕೆ ಆಗಿದೆ ಎಂದರು.
ನಿಟ್ಟೂರು ವೈದ್ಯಾಧಿಕಾರಿ ಹಾಗೂ ಜಾಥಾ ಸಂಚಾಲಕ ಡಾ.ಮಂಜುನಾಥ್ ಮಾತನಾಡಿ, ಕನಿಷ್ಠ ಪ್ರಜ್ಞೆ, ಒಂದಿಷ್ಟು ಬದ್ಧತೆ ಮತ್ತು ಸಾಮೂಹಿಕ ಕೆಲಸದಿಂದ ಎಂತಹ ಕಷ್ಟಗಳನ್ನಾದರೂ ಎದುರಿಸಬಹುದು. ಹಾಗೆಯೇ ನಮ್ಮ ಮನೆಯ ಕಸವನ್ನು ಮನೆಯಲ್ಲೇ ರಸ ಮಾಡಿಕೊಳ್ಳುವ ಕನಿಷ್ಠ ಜ್ಞಾನ ಬೆಳೆಸಿಕೊಂಡರೆ ವೈಯಕ್ತಿಕ ಜೀವನಕ್ಕೆ ಹಾಗೂ ದೇಶಕ್ಕೆ ಅನುಕೂಲವಾಗುವುದು ಎಂದರು.
ಶಾಲೆಯ 150ಕ್ಕೂ ಹೆಚ್ಚು ಮಕ್ಕಳು, ಶಾಲಾ ಶಿಕ್ಷಕರು, ಪಂಚಾಯಿತಿ ಸದಸ್ಯರು, ಸ್ತ್ರೀಶಕ್ತಿ ಸಂಘದ ಮಹಿಳೆಯರು ಗ್ರಾಮದ ಎಲ್ಲ ಬೀದಿಗಳಲ್ಲೂ ಜಾಥಾ ಹೊರಟು ಪ್ಲಾಸ್ಟಿಕ್ ಮಾಲಿನ್ಯದ ಅಪಾಯ ತಿಳಿಸಿ ಪ್ಲಾಸ್ಟಿಕ್ ಸಂಗ್ರಹಿಸಿ ಪ್ಲಾಸ್ಟಿಕ್ ಕಸವನ್ನು ನವೀಕರಣಕ್ಕೊಳಪಡುವ ಮತ್ತು ನವೀಕರಣಗೊಳ್ಳದ ಪ್ಲಾಸ್ಟಿಕ್‌ಗಳಾಗಿ ವಿಂಗಡಿಸಿ ನವೀಕರಣಗೊಳ್ಳದ ಪ್ಲಾಸ್ಟಿಕ್ ಅನ್ನು ಬಾಟಲಿನಲ್ಲಿ ಸಂಗ್ರಹಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ರಾಧಾ, ಪಿಡಿಒ ಮಲ್ಲೇಶಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಮಾತನಾಡಿದರು. ಇಕೋ ಕ್ಲಬ್ ಸಂಚಾಲಕ ಪುರುಷೋತ್ತಮ್ ಹಾಗೂ ಟಿಪಿಎಂ ವೇಣುಗೋಪಾಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಟರಾಜ್, ಕಾರ್ಯದರ್ಶಿ ಕುಮಾರ್, ಮುನಿಸ್ವಾಮಿ, ರೂಪಾ, ಶಿಕ್ಷಕರಾದ ಮಮತಾ, ದಾನೇಶ್, ಕವಿತಾ ಹಾಗೂ ಸಾರ್ವಜನಿಕರು ಇದ್ದರು.