

ಧಾರವಾಡ: ನಗರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ನವಲಗುಂದ ತಾಲೂಕಿನ ಶಿರೂರ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಲಾಕ್ಡೌನ್ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸಂವಾದ ನಡೆಸಿದರು.
ಗ್ರಾಮದ ರೈತ ಪ್ರಕಾಶ ಬಾಳನಗೌಡರ ಮಾತನಾಡಿ, ಗ್ರಾಮದ ಪೇರಲ ಬೆಳೆಗೆ ಸುತ್ತಲಿನ ಪ್ರದೇಶಗಳಲ್ಲಿ ಅತೀ ಬೇಡಿಕೆ ಇದೆ. ವರ್ಷಕ್ಕೆ ಎಕರೆಗೆ ಸುಮಾರು 1 ಲಕ್ಷ ರೂ. ಲಾಭ ಪಡೆಯಲಾಗುತ್ತಿತ್ತು. ಈ ಬಾರಿ ತೋಟಗಳನ್ನು ಗುತ್ತಿಗೆ ಹಿಡಿಯುವವರೇ ಇಲ್ಲದೆ, ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದೆ ಹಣ್ಣುಗಳು ನೆಲಕ್ಕುರುಳಿ ರೈತ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕೇಂದ್ರದ ಸಿಬ್ಬಂದಿ ಎದುರು ಅಳಲು ತೋಡಿಕೊಂಡರು.
ಈ ಕುರಿತು ಸಮಗ್ರವಾಗಿ ಮಾಹಿತಿ ಪಡೆದ ಕೇಂದ್ರದ ಸಿಬ್ಬಂದಿ, ಪೇರಲ ಹಣ್ಣಿನ ಮಾರಾಟಕ್ಕಾಗಿ ರೈತ ಉತ್ಪಾದಕ ಕಂಪನಿ ಹಾಗೂ ಬೆಂಗಳೂರಿನ ಹಾಪಕಾಮ್ಸ್ನೊಂದಿಗೆ ಸಂರ್ಪಸಿ ರೈತರಿಗೆ ಅವರ ಪರಿಚಯ ಮಾಡಿಕೊಡಲಾಗಿದೆ. ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೃಷಿ ವಿಶ್ವ ವಿದ್ಯಾಲಯದಲ್ಲಿ ಪ್ರಾರಂಭಿಸಿರುವ ಅಗ್ರಿ ವಾರ್ ರೂಂ (18004251150)ಗೆ ಬೆಳಗ್ಗೆ 8ರಿಂದ ಸಂಜೆ 8ರವರೆಗೆ ಸಂರ್ಪಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚೆ ನಡೆಸಿ, ರೋಗ ನಿರ್ವಹಣೆಯಲ್ಲಿ ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ಶುಭಾ ಎಸ್., ವಿಜ್ಞಾನಿಗಳಾದ ಡಾ. ಗೀತಾ ತಾಮಗಾಳೆ, ಕೀಟಶಾಸ್ತ್ರ ವಿಜ್ಞಾನಿ ಕಲಾವತಿ ಕಂಬಳಿ, ಇತರರು ಇದ್ದರು.