ಚಿಕ್ಕಮಗಳೂರು: ರಸಗೊಬ್ಬರವನ್ನು ಗೌಪ್ಯವಾಗಿ ಸಂಗ್ರಹಿಸಿ, ಅಭಾವ ಸೃಷ್ಟಿಸುವ ಮೂಲಕ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು ಎಂದು ರಸಗೊಬ್ಬರ ಮಾರಾಟಗಾರರಿಗೆ ಜಂಟಿ ಕೃಷಿ ನಿರ್ದೇಶಕಿ ಎಚ್.ಎಲ್.ಸುಜಾತ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ಉಪ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆ ವತಿಯಿಂದ ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಸಗೊಬ್ಬರ ಮತ್ತು ಕೃಷಿ ಪರಿಕರಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡುವಂತೆ ಸೂಚಿಸಿದರು.
ರೈತರು ಖರೀದಿಸಿದ ಕೃಷಿ ಸಾಮಗ್ರಿಗಳಿಗೆ ಕಡ್ಡಾಯವಾಗಿ ರಶೀದಿ ನೀಡುವುದರ ಜೊತೆಗೆ ರಸೀದಿಯ ಮೇಲೆ ಸಂಬAಧಪಟ್ಟ ರೈತರ ಸಹಿ ಪಡೆಯಬೇಕು. ಒತ್ತಾಯ ಪೂರ್ವಕವಾಗಿ ಒಂದೇ ಸಂಸ್ಧೆಯ ಬಿತ್ತನೆ ಬೀಜ ಮಾರಾಟ ಮಾಡಲು ಒತ್ತಡ ಹೇರಬಾರದು. ರೈತರ ಆಯ್ಕೆಗೆ ಅನುಗುಣವಾಗಿ ಬಿತ್ತನೆ ಬೀಜ ನೀಡಬೇಕು. ಈ ವಿಚಾರದಲ್ಲಿ ನಿಯಮಗಳನ್ನು ಅನುಸರಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕೃಷಿ ನಿರ್ದೇಶಕಿ ಸಿ.ಸುಜಾತ ಮಾತನಾಡಿ, ರೈತರು ಬೆಳೆ ಬೆಳೆದು ಅಭಿವೃದ್ಧಿ ಹೊಂದಿದಲ್ಲಿ ಇಲಾಖೆ ಮತ್ತು ಪರಿಕರ ಮಾರಾಟಗಾರರಿಗೆ ಹೆಚ್ಚು ಖುಷಿಯಾಗಲಿದೆ. ಮಾರಾಟಗಾರರು ದುಡಿಮೆ ಜೊತೆಗೆ ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಿದಾಗ ಅವರ ಬಗ್ಗೆ ಗೌರವ ಮೂಡಲಿದೆ. ಈ ನಿಟ್ಟಿನಲ್ಲಿ ಇಲಾಖೆ ಮೂಲಕ ಮುಂಗಾರು ಹಂಗಾಮಿನಲ್ಲಿ ಪರಿಕರಗಳ ಮಾರಾಟಗಾರರು ಕೈಗೊಳ್ಳಬಹುದಾದ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳಿಂದ ಮಾಹಿತಿ ಕೊಡಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಉಪ ಕೃಷಿ ನಿರ್ದೇಶಕ ವೆಂಕಟೇಶ್ ಚೌಹಾಣ್ ಮಾತನಾಡಿ, ಪರಿಕರಗಳ ಮಾರಾಟಗಾರರು ಕಾನೂನುಗಳನ್ನು ಪಾಲಿಸಿ ರೈತರಿಗೆ ಅನುಕೂಲವಾಗುವಂತೆ ತಮ್ಮ ವ್ಯವಹಾರದಲ್ಲಿ ಸೇವಾ ಬದ್ಧತೆ ಪ್ರದರ್ಶಿಸಬೇಕು ಹಾಗೂ ಪರಿಕರಗಳ ಮಾರಾಟಗಾರರು ಇಲಾಖೆ ನಡುವಿನ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ರೈತರ ಅಭಿವೃದ್ಧಿಗೆ ವರದಾನವಾಗಿದೆ. ವ್ಯಾವಹಾರಿಕ ಹಿತದೃಷ್ಟಿಯೊಂದಿಗೆ ರೈತರ ಪ್ರಗತಿಗೂ ಹೆಚ್ಚು ಗಮನ ನೀಡಿದಾಗ ಮಾಡುವ ಕಾರ್ಯದಲ್ಲಿ ಸಫಲರಾಗಲು ಸಾಧ್ಯ ಎಂದು ಹೇಳಿದರು.
ಪ್ರತಿವರ್ಷ ಸರ್ಕಾರದಿಂದ ಜಾರಿಗೊಳ್ಳುವ ನಿಯಾಮಾವಳಿಗಳ ಮಾಹಿತಿ ನೀಡುವ ಮೂಲಕ ತಮ್ಮ ಕಾರ್ಯನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ನಿರ್ದೇಶನ ನೀಡಲಾಗುತ್ತದೆ. ಕಳಪೆ ಗುಣಮಟ್ಟದ ಬಿತ್ತನೆ ಬೀಜ, ಕಳೆನಾಶಕ ನೀಡಿ ರೈತರನ್ನು ವಂಚಿಸುತ್ತಿರುವ ಪ್ರಕರಣಗಳು ಸಾಕಷ್ಟಿವೆ. ಇವುಗಳಿಗೆ ಕಡಿವಾಣ ಹಾಕಲು ಪರಿಕರಗಳ ಮಾರಾಟಗಾರರು ಸನ್ನದ್ಧರಾಗಬೇಕು. ಪ್ರತಿಯೊಂದು ಮಾರಾಟಗಳಿಗೆ ಪರವಾನಗಿ ಪಡೆದುಕೊಂಡು ಪಾರದರ್ಶಕತೆಯಿಂದ ವ್ಯವಹರಿಸುವ ಮೂಲಕ ರೈತರಿಗೆ ನ್ಯಾಯ ದೊರಕಿಸಬೇಕು ಎಂದರು.
ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ತಿಮ್ಮನಗೌಡ ಪಾಟೀಲ್ ಮಾತನಾಡಿ, ಸಮರ್ಪಕ ದಾಖಲೆಗಳನ್ನು ಪರಿಕರಗಳ ಮಾರಾಟಗಾರರು ತಮ್ಮ ಮಳಿಗೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಯೂರಿಯಾ ಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾಡುವುದು ಕಾನೂನು ಬಾಹಿರ. ಕೇಂದ್ರ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಸಿಗುವ ಯೂರಿಯಾವನ್ನು ರೈತರಿಗೆ ಮಾತ್ರ ಮಾರಾಟ ಮಾಡಬೇಕು. ಅನ್ಯವ್ಯಕ್ತಿಗಳಿಗೆ ಸಬ್ಸಿಡಿ ಯೂರಿಯಾ ಗೊಬ್ಬರ ಮಾರಾಟ ಮಾಡಿರುವುದು ಕಂಡುಬAದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಇಂತಹ ಪ್ರಕರಣಗಳಲ್ಲಿ ಈಗಾಗಲೇ ಮಳಿಗೆಗಳನ್ನು ಸೀಜ್ ಮಾಡಲಾಗಿದೆ. ಮಾರಾಟಗಾರರು ನಿಗದಿತ ಮಳಿಗೆ ಬಿಟ್ಟು ಪ್ರತ್ಯೇಕ ಸ್ಥಳದಲ್ಲಿ ಪರಿಕರಗಳನ್ನು ಮಾರಾಟ ಮಾಡುವುದಾದರೆ ಅದಕ್ಕೂ ಪರವಾನಗಿ ಪಡೆಯುವುದು ಕಡ್ಡಾಯ. ಸರ್ಕಾರದಿಂದ ಅನುಮೋದಿತಗೊಂಡÀ ಸಿಐಆರ್‌ಬಿ ನೋಂದಣಿಯಾಗಿರುವ ಕೀಟನಾಶಕವನ್ನು ಮಾತ್ರ ಮಾರಾಟ ಮಾಡಬೇಕು ಎಂದರು.
ಪ್ರತಿ ತಿಂಗಳು ಮಾರಾಟಗಾರರು ತಮ್ಮ ದಾಸ್ತಾನಿನ ಮಾಹಿತಿಯನ್ನು ಕೃಷಿ ಇಲಾಖೆಗೆ ಸಲ್ಲಿಸಬೇಕು. ಸುರಕ್ಷಿತ ಕೀಟನಾಶಕಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಕಳಪೆ ಡಿಎಪಿ ಗೊಬ್ಬರ ಸರಬರಾಜುಗೊಂಡರೆ ಮಾರಾಟ ಮಾಡದೆ ಕೂಡಲೇ ಇಲಾಖೆ ಗಮನಕ್ಕೆ ತರಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕೃಷಿ ಪರಿಕರಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್, ತಾಲೂಕು ಕೃಷಿ ಪರಿಕರಮಾರಾಟಗಾರರ ಸಂಘದ ಅಧÀ್ಯಕ್ಷ ತಿಮ್ಮಯ್ಯ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ತಾಂತ್ರಿಕ ಅಧಿಕಾರಿ ಶೈಲಾ ಮತ್ತಿತರರಿದ್ದರು.