ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕ್ರಮ

h23- Kshamata 1
Published on

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯ ರಕ್ಷಣೆಗಾಗಿ ಫೇಸ್ ಮಾಸ್ಕ್ ಕಡ್ಡಾಯಗೊಳಿಸಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಪ್ರೇರಣಾದಾಯಕ ಕಾರ್ಯ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾದ ಮಾಸ್ಕ್, ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನರ್​ಗಳನ್ನು ನಗರದಲ್ಲಿ ಡಿಡಿಪಿಐ ಮೋಹನ ಹಂಚಾಟೆ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ಕ್ಷಮತಾ ಸಂಸ್ಥೆಯಿಂದ ಈ ಕಾರ್ಯ ಮಾಡಿರುವುದು ಪ್ರಲ್ಹಾದ ಜೋಶಿಯವರ ಸಾಮಾಜಿಕ ಪ್ರಜ್ಞೆ, ವಿದ್ಯಾರ್ಥಿಗಳ ಮೇಲಿನ ಕಳಕಳಿ ತೋರಿಸುತ್ತದೆ. ತಮ್ಮ ಇಲಾಖೆ ಕಾರ್ಯಗಳ ಜತೆಗೆ ಕ್ಷೇತ್ರದ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವುದು ನಿಜಕ್ಕೂ ನಮಗೆಲ್ಲ ಪ್ರೇರಣಾದಾಯಕ ಎಂದರು.

ಕ್ಷಮತಾ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 35000 ವಿದ್ಯಾರ್ಥಿಗಳಿಗೆ ತಲಾ ಎರಡು ಮಾಸ್ಕ್ ವಿತರಿಸಲು ಒಟ್ಟು 70,000 ಟ್ರಿಪಲ್ ಲೇಯರ್ ಮಾಸ್ಕ್ ಹಾಗೂ ಸ್ಯಾನಿಟೈಸರ್ ಮತ್ತು 250 ಥರ್ಮಲ್ ಸ್ಕ್ರೀನರ್​ಗಳನ್ನು ವಿತರಿಸಲು ಕ್ಷಮತಾ ಮುಂದಾಗಿದೆ. ಆಯಾ ಪರೀಕ್ಷೆ ನಡೆಯುವ ಕೇಂದ್ರಗಳಿಗೆ ಈಗಾಗಲೇ ತಲುಪಿಸಲಾಗಿದೆ ಎಂದರು.

ಡಿಡಿಪಿಐ ಮೋಹನ ಹಂಚಾಟೆ ಮಾತನಾಡಿ, ಮಕ್ಕಳ ಸುರಕ್ಷತೆ, ಆತ್ಮವಿಶ್ವಾಸ ಹೆಚ್ಚಿಸಲು ಆದ್ಯತೆ ನೀಡಿ ಸಚಿವ ಪ್ರಲ್ಹಾದ ಜೋಶಿಯವರು ಮಾದರಿ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಜೋಶಿಯವರ ಹೆಚ್ಚುವರಿ ಅಪರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನಗೌಡ ಪಾಟೀಲ, ಮಾಜಿ ಮೇಯರ್ ವೀರಣ್ಣ ಸವಡಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಸಂತೋಷ ಚವ್ಹಾಣ, ಚಂದ್ರಶೇಖರ ಬೆಳವಾಡಿ, ರಾಘವೇಂದ್ರ ಯರಕಲ್, ಮಲ್ಲಿಕಾರ್ಜುನ ಸಾಹುಕಾರ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಮಹೇಂದ್ರ ಕೌತಾಳ, ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net