

ಮುಳಗುಂದ: ಸಮೀಪದ ಸೊರಟೂರ, ಯಲಿಶಿರೂರ ಸೇರಿ ಇತರೆ ಗ್ರಾಮಗಳಲ್ಲಿ ಭಾನುವಾರ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಮನುಕುಲಕ್ಕಾಗಿ ಭಿಕ್ಷೆ ಅಭಿಯಾನ ಆರಂಭಿಸಿ ರೈತರ ಮನೆಗಳಿಂದ ದವಸ ಧಾನ್ಯಗಳನ್ನು ಭಿಕ್ಷೆ ರೂಪದಲ್ಲಿ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಲಾಕ್ ಡೌನ್ನಿಂದ ಬಡವರು, ನಿರ್ಗತಿಕರಿಗೆ ಆಹಾರದ ಸಮಸ್ಯೆಯಾಗಿದೆ. ಅವರಿಗೆ ಆಹಾರ ಧಾನ್ಯ ಪೂರೈಸಲು ಭಾನುವಾರದಿಂದ ಮನುಕುಲಕ್ಕಾಗಿ ಭಿಕ್ಷೆ ಅಭಿಯಾನ ಆರಂಭಿಸಿದ್ದೇನೆ. ಗ್ರಾಮೀಣ ಭಾಗದಲ್ಲಿರುವ ರೈತರು ತಾವು ಬೆಳೆದ ಜೋಳ, ಕಡಲೆ, ಹೆಸರು ಸೇರಿ ದವಸ ಧಾನ್ಯಗಳನ್ನು ಮುಕ್ತ ಮನಸ್ಸಿನಿಂದ ನೀಡುತ್ತಿದ್ದಾರೆ. ಒಂದೇ ದಿನದಲ್ಲಿ 15 ಕ್ವಿಂಟಾಲ್ ಧಾನ್ಯ ಸಂಗ್ರಹವಾಗಿದೆ. ಗದಗ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೂ ಸಂಚರಿಸಿ ಧಾನ್ಯ ಸಂಗ್ರಹಿಸಲಾಗುತ್ತದೆ ಅದರ ಜೊತೆಯಲ್ಲೇ ನನ್ನ ಸಹಾಯ ಸೇರಿಸಿ ನಿರ್ಗತಿಕ ಹಾಗೂ ಬಡವರಿಗೆ ವಿತರಿಸಲಾಗುತ್ತದೆ. ಕರೊನಾ ನಿಮೂಲನೆಗೆ ಸರ್ಕಾರ ಕೈಗೊಂಡ ನಿಯಮಗಳನ್ನು ಎಲ್ಲರೂ ಪಾಲಿಸಿ, ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಎಪಿಎಂಸಿ ಸದಸ್ಯೆ ಪ್ರೇಮಾ ಹೊಸಮಠ, ಗ್ರಾಪಂ ಸದಸ್ಯರಾದ ಭದ್ರೇಶ ಕುಸ್ಲಾಪೂರ, ಬಸವರಾಜ ಚವ್ಹಾಣ, ಮುಖಂಡರಾದ ಆರ್.ಎಸ್. ಕಮ್ಮಾರ, ಶಿವಜೋಗಯ್ಯ ಹಿರೇಮಠ, ಮಹಾಂತೇಶ ಘೊಡಕೆ, ಮಹಾದೇವಪ್ಪ ಹಡಪದ, ಮಂಜು ಮೀರಗಾಣೆ, ಅಶೋಕ ಮಲ್ಲಾರಿ, ಇತರರಿದ್ದರು.
EndFragment