

ಬೀರೂರು: ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಅದುವೇ ಕನ್ನಡ. ಎಷ್ಟೇ ಭಾಷೆಗಳನ್ನು ಕಲಿತರೂ ಮಾತೃಭಾಷೆಯಲ್ಲೇ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ಹೇಳಿದರು.
ಪುರಸಭೆ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಉಳಿವಿಗಾಗಿ ಹಲವರು ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಇಂದಿನ ಪೀಳಿಗೆಗೆ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ದೇಶದಲ್ಲಿ ಕನ್ನಡಿಗರ ಸಹಿಷ್ಣುತೆ ಹೆಸರುವಾಗಿಯಾಗಿದ್ದು, ದೇಶದ ಎಲ್ಲ ಭಾಗದ ಜನರು ನಮ್ಮ ನಾಡಿನಲ್ಲಿ ನೆಲೆಸಿರುವುದು ಇದಕ್ಕೆ ಉದಾಹರಣೆ. ಅವರೆಲ್ಲರೂ ಕನ್ನಡ ಕಲಿತು ಭಾಷೆ ಕಂಪನ್ನು ಇನ್ನಷ್ಟು ಪಸರಿಸಲಿ ಎಂದು ಆಶಿಸಿದರು.
ನಾಗರಿಕರ ಪರವಾಗಿ ಮಾತನಾಡಿದ ಕೆ.ಎಸ್.ಸೋಮಶೇಖರ್, ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದರೂ ನಮ್ಮವರ ಕೀಳರಿಮೆ ಮತ್ತು ಪರಭಾಷಾ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಸರ್ಕಾರಿ ಶಾಲೆಗಳ ಉಳಿವಿನಿಂದ ಮಾತ್ರ ಕನ್ನಡ ಉಳಿಯಲಿದೆ ಎನ್ನುವ ಅರಿವು ಎಲ್ಲರಲ್ಲೂ ಮೂಡಿ ಕನ್ನಡ ಶಾಲೆಗಳಲ್ಲಿ ಹೆಚ್ಚು ಮಕ್ಕಳು ಓದುವಂತಾಗಲಿ ಎಂದರು.
ಕಸಾಪದಿಂದ ನಿವೃತ್ತ ಯೋಧ, ನಿವೃತ್ತ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳು ನಾಡಗೀತೆ ಕನ್ನಡದ ಹಿರಿಮೆ ಸಾರುವ ಗೀತೆಗಳನ್ನು ಪ್ರಸ್ತುತಪಡಿಸಿದರು.
ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಮುಖ್ಯಾಧಿಕಾರಿ ಜಿ.ಪ್ರಕಾಶ್, ಸದಸ್ಯ ಬಿ.ಆರ್.ಮೋಹನ್‌ಕುಮಾರ್, ಜ್ಯೋತಿ ಸಂತೋಷ್, ಮೀನಾಕ್ಷಮ್ಮ, ಜ್ಯೋತಿ, ಸಹನಾ, ಲಕ್ಷ್ಮಣ, ಹರಿಪ್ರಸಾದ್, ಲಕ್ಷ್ಮಣ್, ದೀಪಕ್, ಗಿರಿರಾಜ್, ಮಧು ಬಾವಿಮನೆ, ಬಿ.ಎಂ.ರುದ್ರಪ್ಪ, ರವಿ ಇದ್ದರು.