ಪರಿಶಿಷ್ಟ ಜಾತಿ ಒಳ ಮೀಸಲಾತಿ ಗಣತಿ 5 ರಿಂದ

CTD DC T. venktesh..............
Published on

ಚಿತ್ರದುರ್ಗ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಸಂಬಂಧ ಮೇ 5 ರಿಂದ ಆರಂಭವಾಗಲಿರುವ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಮೊದಲ ಹಂತ 5ರಿಂದ 17 ರವರೆಗೆ ಮನೆ-ಮನೆಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುತ್ತದೆ. 2 ನೇ ಹಂತ 19 ರಿಂದ 21 ರವರೆಗೆ ಸಮೀಕ್ಷೆ ಬ್ಲಾಕ್‌ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು, ಮನೆ, ಮನೆ ಭೇಟಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. 3 ನೇ ಹಂತ 19 ರಿಂದ 21 ರವರೆಗೆ ಸ್ವಯಂ ಘೋಷಣೆ (ಆನ್‌ಲೈನ್ ಮೂಲಕ) ಸಮೀಕ್ಷೆಗೆ ಮಾಹಿತಿ ಒದಗಿಸಲು ಅವಕಾಶವಿದೆ ಎಂದು ಡಿಸಿ ಹೇಳಿದರು.

ಸಮೀಕ್ಷಾ ಕಾರ‌್ಯದ ಪೂರ್ವಭಾವಿಯಾಗಿ ರಾಜ್ಯಮಟ್ಟದಲ್ಲಿ ನಡೆದ ತರಬೇತಿಗೆ ಚಿತ್ರದುರ್ಗ ಜಿಲ್ಲೆಯಿಂದ ಮೂವರು ಮಾಸ್ಟರ್ ಟ್ರೈನರ್‌ಗಳನ್ನು ನಿಯೋಜಿಸಲಾಗಿತ್ತು. ಇವರು ಏ.25 ರಂದು ಬೆಂಗಳೂರಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿ, ಸಮೀಕ್ಷೆ ಕಾರ್ಯಗಳ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಏ.28 ರಂದು ನಡೆದ ಜಿಲ್ಲಾ ಮಟ್ಟದ ತರಬೇತಿ ಕಾರ‌್ಯಕ್ರಮದಲ್ಲಿ ಜಿಲ್ಲೆಯ 6 ತಾಲೂಕುಗಳಿಂದ ನಿಯೋಜಿಸಿದ್ದ ತಾಲೂಕು ಮಟ್ಟದ 30 ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ನೀಡಿದ್ದಾರೆ.

2 ರಂದು ತಾಲೂಕು ಹಂತದಲ್ಲಿ ಮಾಸ್ಟರ್ ಟ್ರೈನರ್‌ಗಳು ಸಮೀಕ್ಷೆ ಕಾರ್ಯಕೈಗೊಳ್ಳುವ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ತರಬೇತಿ ನೀಡಲಿದ್ದಾರೆ. ತಹಸೀಲ್ದಾರ್ ಮತ್ತು ತಾಪಂಗಳನ್ನೊಳಗೊಂಡ ತಾಲೂಕು ಸಮನ್ವಯ ಸಮಿತಿ ನೇತೃತ್ವದಲ್ಲಿ ಈ ತರಬೇತಿ ಆಯೋಜಿಸಲಾಗಿದೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೊಳಿಸುವ ಸಂಬಂಧ ಏಕ ಸದಸ್ಯ ಆಯೋಗದ ಅಧ್ಯಕ್ಷರು, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರು, 2025ರ ಮಾರ್ಚ್ 27ರಂದು ಮುಖ್ಯಮಂತ್ರಿ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣಕ್ಕಾಗಿ ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ‌್ಯದರ್ಶಿ ಅವರು, ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಸಮನ್ವಯ ಸಮಿತಿಗಳನ್ನು ರಚಿಸಿ ಆದೇಶಿಸಿದ್ದರು.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ವೇಳಾಪಟ್ಟಿ ಅನ್ವಯ ಸಮೀಕ್ಷಾ ಕಾರ‌್ಯ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಎಲ್ಲ ಪರಿಶಿಷ್ಟ ಜಾತಿ ಸಮುದಾಯದವರು ಗಣತಿದಾರರಿಗೆ ಅಗತ್ಯ ಮಾಹಿತಿ ನೀಡಿ ಸಮೀಕ್ಷೆ ಯಶಸ್ವಿ ಗೊಳಿಸಬೇಕು ಎಂದು ಡಿಸಿ, ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್ ಕೋರಿದ್ದಾರೆ.

(ಸಿಟಿಡಿ 29 ಡಿಸಿ ಟಿ.ವೆಂಕಟೇಶ್)

(ಮಗ್‌ಶಾಟ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net