

ಚಿತ್ರದುರ್ಗ: ಬೆಂಗಳೂರಿನಲ್ಲಿ ಆ. 19ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿರುವ ಗುರು ನುಲಿಯ ಚಂದಯ್ಯ ಜಯಂತಿಗೆ ಸಮಾಜದವರನ್ನು ಕಡೆಗಣಿಸಲಾಗಿದೆ ಎಂದು ಅಖಿಲ ಕರ್ನಾಟಕ ಕೊರಚ ಮಹಾಸಂಘದ ಅಧ್ಯಕ್ಷ ಎಚ್.ಎನ್.ರಾಮಚಂದ್ರಪ್ಪ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಳುವ ಮಹಾಸಭಾ ಎಂಬುದಾಗಿ ಸಮಾಜವನ್ನು ಕೆಲವರು ದಿಕ್ಕು ತಪ್ಪಿಸುತ್ತಿದ್ದಾರೆ. ಅವರಿಗೆ ಆಹ್ವಾನವಿದ್ದು, ಸಮುದಾಯದ ಸ್ವಾಮೀಜಿಗೆ, ನಮ್ಮವರಿಗೆ ನೀಡದೆ ಅವಮಾನಿಸಲಾಗಿದೆ. ಹೀಗಾಗಿ ಈ ಜಯಂತಿಯಲ್ಲಿ ಕೊರಚ, ಕೊರಮ, ಕೊರವಂಜಿ, ಕೊರವ, ಯರುಕುಲ ಸೇರಿ 2.5 ಲಕ್ಷ ಜನಸಂಖ್ಯೆ ಇರುವ ನಾವುಗಳ್ಯಾರು ಭಾಗವಹಿಸುವುದಿಲ್ಲ ಎಂದರು.
ಮುಂದಿನ ವರ್ಷದಿಂದ ಪ್ರತ್ಯೇಕವಾಗಿ ಜಯಂತಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯ ಸರ್ಕಾರ ಆದೇಶಿಸಬೇಕು. ಮುಂದಿನ ದಿನಗಳಲ್ಲಿ ನಾವೂ ಚಿತ್ರದುರ್ಗದಲ್ಲಿ ಪ್ರತ್ಯೇಕವಾಗಿ ಆಚರಿಸಲಿದ್ದೇವೆ ಎಂದು ತಿಳಿಸಿದರು.
ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ತಿಮ್ಮಣ್ಣ, ಮುಖಂಡರಾದ ಮಂಜಪ್ಪ, ಶಿವಾನಂದಪ್ಪ, ಗಾಳೆಪ್ಪ ಇತರರಿದ್ದರು.