

ಚಿತ್ರದುರ್ಗ: ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದೇ ಒಂದು ರಾಷ್ಟ್ರ-ಒಂದು ಚುನಾವಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಕೇಂದ್ರ ಕ್ರೀಡಾ ಸಚಿವಾಲಯ,ನೆಹರು ಯುವಕೇಂದ್ರ ಹಾಗೂ ದಾವಣಗೆರೆ ವಿವಿ ಸಹಯೋಗದಲ್ಲಿ ನಗರದ ಡಾನ್‌ಬಾಸ್ಕೋ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ವಿಕಸಿತ ಭಾರತ ಯುವ ಸಂಸತ್-ಯುವಜನರ ಭಾಷಣ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಒಂ ದು ರಾಷ್ಟ್ರ-ಒಂದು ಚುನಾವಣೆ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ,ಇದು ಕೇವಲ ಒಂದು ಘೋಷಣೆ ಯಲ್ಲ,ಬದಲಿಗೆ 140 ಕೋಟಿ ಭಾರತೀಯರ ಹೃದಯ ಬಡಿತವಾಗಿದೆ.
ಚುನಾವಣೆ ಪ್ರಕ್ರಿಯೆ ಸುಗಮಗೊಳಿಸುವ,ಪದೆ ಪದೇ ಚುನಾವಣೆಗಳನ್ನು ನಡೆಸುವುದನ್ನು ನಿಯಂತ್ರಿಸುವ,ಸಮಯ ಹಾಗೂ ಸಂಪನ್ಮೂಲಗಳ ನ್ನು ಉಳಿಸುವುದು ಈ ಯೋಜನೆ ಉದ್ದೇಶವಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಈಗಾಗಲೇ ಅತ್ಯಂತ ಯಶಸ್ವಿಯಾಗಿ ಚುನಾವಣೆಗಳನ್ನು ನಡೆದಿವೆ. ಈ ಹಿನ್ನೆಲೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಕ್ರಿಯೆ ನಮ್ಮ ದೇಶಕ್ಕೆ ಸವಾಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರಪಂಚದಲ್ಲೇ ಅತಿ ಹೆಚ್ಚು ದುಡಿಯುವ ಯುವ ಜನರನ್ನು ಹೊಂದಿರುವ ದೇಶ ಭಾರತ. ಯುವ ಶಕ್ತಿಯನ್ನು ಸಮರ್ಥವಾಗಿ ಬಳಸ ಬೇಕೆಂ ಬುದು ಮೋದಿ ಅವರ ಬಯಕೆಯಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಕೌಶಲ ಕೇಂದ್ರಗಳನ್ನಾರಂಭಿಸಿ ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಭಾರತವನ್ನು ವಿಶ್ವದ ಕೌಶಲ ರಾಜಧಾನಿಯನ್ನಾಗಿ ಮಾಡುವ ಕನಸು ಮೋದಿ ಅವರದ್ದಾಗಿ ದೆ. ಯುವಜನರು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು,ಭವಿಷ್ಯದ ರಾಯಭಾರಿಗಳಾಬೇಕು. ಯುವಜನರು ಹೆಚ್ಚಿನ ಸಂಖ್ಯೆಯ ಲ್ಲಿ ರಾಜಕಾರಣಕ್ಕೆ ಬರಬೇಕು,ಶುದ್ಧ ರಾಜಕಾರಣ ದೇಶಕ್ಕೆ ಅಗತ್ಯವಿದೆ ಎಂದರು.
ಚಿತ್ರದುರ್ಗ,ದಾವಣಗೆರೆ ಜಿಲ್ಲೆಗಳಿಂದ ಭಾಗವಹಿಸಿದ್ದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ, ರಾಜ್ಯಮಟ್ಟಕ್ಕೆ ಆಯ್ಕೆಯಾದ 10 ವಿದ್ಯಾರ್ಥಿಗಳನ್ನು ಹಾಗೂ ತೀರ್ಪುಗಾರರನ್ನು ಸಂಸದರು ಗೌರವಿಸಿದರು. ಕುಡಾ ಅಧ್ಯಕ್ಷ ಎಂ.ಕೆ.ತಾಜಪೀರ್,ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿಗಿರೀಶ್,ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸಿ.ಹನುಮಂತೇಗೌಡ,ಡಾನ್‌ಬಾಸ್ಕೋ ಕಾಲೇಜು ಆಡಳಿತಾಧಿಕಾರಿ ವಿ.ಎಂ.ಮ್ಯಾಥ್ಯೂ,ನೆಹರು ಯುವ ಕೇಂದ್ರ ದ ಸುಹಾಸ್ ಮತ್ತಿತರರು ಇದ್ದರು.