

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ನೂತನ ಜ್ಞಾನಸಿರಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಬಹೂಪಯೋಗಿ ಕೇಂದ್ರ ಸ್ಥಾಪಿಸಲಾಗುವುದು ಎಂದು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು. ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ "ಯುವಜನ ಹಾಗೂ ಸಹಕಾರ' ಕುರಿತ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಿದರಕಟ್ಟೆಯ ಹೊಸ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಅನೇಕ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುತ್ತಿದೆ. ಸ್ಟೂಡೆಂಟ್ ಯುಟಿಲಿಟಿ
(ವಿದ್ಯಾರ್ಥಿಗಳ ಬಹೂಪಯೋಗಿ) ಕೇಂದ್ರ ಸ್ಥಾಪಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣಗೆ ಮನವಿ ಸಲ್ಲಿಸಲಾಗಿದೆ ಎಂದರು.
ಈ ರೀತಿಯ ವಿದ್ಯಾರ್ಥಿಗಳ ವಿವಿದೋದ್ದೇಶ ಕೇಂದ್ರ ಸ್ಥಾಪಿಸುವುದರಿಂದ ವಿದ್ಯಾರ್ಥಿಗಳನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸಲಿದೆ. ವಿಶ್ವವಿದ್ಯಾಲಯ ನಮ್ಮದು ಅನ್ನುವ ಭಾವನೆ ಬರಲಿದೆ. ಆ ಮೂಲಕ ಸಹಕಾರಿ ಆಂದೋಲನದಲ್ಲಿ ತೊಡಗಿಸಿದಂತಾಗಲಿದೆ. ವಿವಿಯಲ್ಲಿ ಬದಲಾವಣೆ ತರುವ ಜತೆಗೆ ಅಧ್ಯಯನದ ಹಂತದಲ್ಲೇ ಸಹಕಾರಿ ಚಳವಳಿ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ಅದನ್ನು ಬಲಪಡಿಸಲು ಸಾಧ್ಯವಾಗಲಿದೆ. ಎಲ್ಲ ಕಾರ್ಯಗಳನ್ನು ಸರ್ಕಾರ ನಿಭಾಯಿಸುವುದು ಕಷ್ಟವಾಗುತ್ತದೆ. ಹಾಗಾಗಿ, ಸರ್ಕಾರೇತರ ಸಂಸ್ಥೆಗಳು ಜನೋಪಯೋಗಿ ಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ ಮಾತನಾಡಿ, ಸಹಕಾರಿ ಸಂಘಗಳಿಗೆ ಯುವಜನತೆಯ ಬೆಂಬಲಬೇಕು. ಎಲ್ಲ ಕಾಲೇಜುಗಳ ಆವರಣದಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸಲು ಪ್ರಯತ್ನ ಮಾಡಬೇಕು. ಅದರಲ್ಲಿ ವಿದ್ಯಾರ್ಥಿಗಳ ಪ್ರತಿನಿಧಿಗಳು ಇರಬೇಕು. ರಾಜ್ಯದಲ್ಲಿ 6300 ಸೌಹಾರ್ದ ಸಂಸ್ಥೆಗಳಿದ್ದು, 40 ಸಾವಿರ ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. ಈವರೆಗೆ 32 ಸಾವಿರ ಕೋಟಿ ರೂ., ಸಾಲವನ್ನು ಸಹಕಾರ ಸಂಸ್ಥೆಗಳು ನೀಡಿವೆ. ಸಮಾಜವನ್ನು ಅಭಿವೃದ್ಧಿ
ಮಾಡುವುದೇ ನಮ್ಮ ಮುಖ್ಯ ಗುರಿ ಎಂದರು.
ಬಿಬಿಎಂ ವಿದ್ಯಾರ್ಥಿನಿ ಒಬ್ಬರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದು, ಇದು ಸಾಧನೆಯ ವಿಚಾರ. ಸಹಕಾ ವಿಷಯವನ್ನು ಪದವಿ ಹಂತದಲ್ಲಿ ಒಂದು ವಿಷಯವನ್ನಾಗಿ ಮಕ್ಕಳಿಗೆ ಪರಿಚಯಿಸಬೇಕು. ಸಹಕಾರಿ ಸಂಸ್ಥೆಗಳಲ್ಲಿ ಅನೇಕ ಉದ್ಯೋಗಾವಕಾಶಗಳಿದ್ದು ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ "ಸಹಕಾರ' ಎಂಬುದು ಬಹಳ ಮುಖ್ಯ. ಒಂದು ಕುಟುಂಬ, ವಿಶ್ವವಿದ್ಯಾಲಯವಾಗಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪರಸ್ಪರ ಸಹಕಾರ ಮುಖ್ಯ. ಎಲ್ಲ ಕ್ಷೇತ್ರದಲ್ಲು ಸಹಕಾರ ಛಾಪು ಮೂಡಿಸಿದೆ. ಒಂದು ದೇಶ ಮಂಚೂಣಿಯ ರಾಷ್ಟ್ರವಾಗಲು ಸಹಕಾರ ಬಹಳ ಮುಖ್ಯ ಎಂದು ವಿವಿ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್ ಹೇಳಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್, ರಾಷ್ಟ್ರೀಯ ಸಹಕಾರಿ ಯೂನಿಯನ್ ವಿಶ್ರಾಂತ ನಿರ್ದೇಶಕ ಡಾ.ಎ.ಆರ್.ಶ್ರೀನಾಥ್, ಹಿರಿಯ ಪ್ರಾಧ್ಯಾಪಕರಾದ ಪ್ರೊ.ಜಯಶೀಲ, ವಾಣಿಜ್ಯ ವಿಭಾಗದ ಡೀನ್ ಪ್ರೊ.ಪಿ.ಪರಮಶಿವಯ್ಯ, ಡಾ. ಬಿ.ಟಿ. ಸಂಪತ್ ಕುಮಾರ್ ಇನ್ನಿತರು ಉಪಸ್ಥಿತರಿದ್ದರು.
ಡಿಸಿಬಿಎಂ ಕೋರ್ಸ್: ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ಸಿ.ಪಿ.ವಿಜಯ ಮಾತನಾಡಿ, ಅಮುಲ್, ನಂದಿನಿ, ಡಿಸಿಸಿ ಬ್ಯಾಂಕ್ ಇಂತಹ ಹಲವಾರು ಸಹಕಾರಿ ಸಂಸ್ಥೆಗಳು ಸಮಾಜದಲ್ಲಿ ವಿಶ್ವಾಸಾರ್ಹತೆಯನ್ನು ಪಡೆದಿವೆ. ಗದಗ ಜಿಲ್ಲೆಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ 1 ವರ್ಷ ಅವಧಿಯ ಸಹಕಾರ ಹಾಗೂ ಬ್ಯಾಂಕಿಂಗ್ ಮ್ಯಾನೇಜ್ಮೆಂಟ್ ಡಿಪ್ಲೊಮೊ ಕೋರ್ಸ್ (ಡಿಸಿಬಿಎಂ ಕೋರ್ಸ್ ) ಅನ್ನು ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಸ್ಥಾಪಿಸಲಾಗಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ತುಮಕೂರು ವಿವಿಯಲ್ಲಿ ಪರಸ್ಪರ "ಸಹಕಾರ' ಕೊರತೆ ಇದೆ. ಸಮಾಜದಲ್ಲಿ ಮಾನವೀಯ ಸಂಬಂಧ ಮುಖ್ಯ. ಅದಕ್ಕೆ ಸಹಕಾರ ಚಳವಳಿ ಮುಖ್ಯ. ವಿವಿಯಲ್ಲಿ ಬೋದಕೇತರ, ಬೋಧಕ ಸಿಬ್ಬಂದಿ ಸಹಕಾರ ಸಂಗಳು ಇಲ್ಲ. ಇನ್ನಾದರೂ ವಿವಿ ಆವರಣದಲ್ಲಿ ಸೌಹಾರ್ದ ಸಂಯುಕ್ತ ಸಹಕಾರಿ ನೇತೃತ್ವದಲ್ಲಿ ಸಹಕಾರ ಸಂ ಸ್ಥಾಪಿಸಲು ಕ್ರಮವಹಿಸಲಾಗುವುದು.| ಪ್ರೊ.ಎಂ.ವೆಂಕಟೇಶ್ವರಲು ವಿವಿ ಕುಲಪತಿ