

ಚಿತ್ರದುರ್ಗ: ಭಾರತ ವಿಶ್ವದಲ್ಲಿಯೇ ಅತ್ಯಂತ ಉನ್ನತ ಸಂಸ್ಕೃತಿ ಹೊಂದಿದ್ದು, ದೇವರು ಮತ್ತು ಜನರ ಮೇಲೆ ನಂಬಿಕೆ ಹೊಂದಿದ ವ್ಯಕ್ತಿ ಎಂದೂ ಸಂಕಷ್ಟಕ್ಕೆ ಸಿಲುಕಿದ ಉದಾಹರಣೆ ಇಲ್ಲ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನ, ಚಿತ್ರದುರ್ಗದಲ್ಲಿ ಯಾದವ, ಲಂಬಾಣಿ, ಕಬೀರಾನಂದಾ ಮಠ ಸೇರಿ ವಿವಿಧ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಯಾವುದೇ ಕೆಲಸ ಆರಂಭಿಸುವ ಮುನ್ನ ದೇವರು, ಧರ್ಮಗುರುಗಳು, ಹಿರಿಯರ ಆಶೀರ್ವಾದ ಪಡೆದು ಮುನ್ನಡೆಯುವುದು ನಮ್ಮ ಸಂಸ್ಕೃತಿ ಎಂದರು.
ನೂರಾರು ಜಾತಿ, ಹತ್ತಾರು ಧರ್ಮ, ಅನೇಕ ಭಾಷೆಗಳಲ್ಲಿ ಏಕತೆ ಹೊಂದಿರುವ ಭಾರತದ ಸೌಹಾರ್ದ ಬದುಕು ಮಾದರಿ ಆಗಿದೆ. ಆದರೆ, ಈಚೆಗೆ ಇದಕ್ಕೆ ಧಕ್ಕೆ ತರುವ ಕಾರ್ಯ ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಜವಾಬ್ದಾರಿ ನಾಗರಿಕರ ಮೇಲೆ ಇದೆ ಎಂದು ಹೇಳಿದರು.
ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಈ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಾಳಿ, ಚುನಾವಣೆಯನ್ನು ಸಮರ, ಯುದ್ಧ ಎಂಬ ಪದಗಳಿಂದ ಕರೆಯುವುದು ಸರಿಯಲ್ಲ ಎಂದರು.
ಸಜ್ಜನಿಕೆ, ಎಲ್ಲ ಜನರ ಪ್ರೀತಿ ಗಳಿಸುವ ಗುಣ ರಾಜಕಾರಣಿಗಳಲ್ಲಿ ಹೆಚ್ಚಬೇಕು. ಜಾತಿ, ಧರ್ಮಗಳನ್ನು ಮುಂದಿಟ್ಟು ಜನರ ಮನಸ್ಸು ಗೆಲ್ಲುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ತಿಳಿಸಿದರು.
ಜನರು ಹೆಚ್ಚು ಪ್ರಜ್ಞಾವಂತರು ಎಂಬುದನ್ನು ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶವೇ ಉದಾಹರಣೆ ಆಗಿದ್ದು, ಲೋಕಸಭಾ ಚುನಾವಣೆಯಲ್ಲೂ ಮರುಕಳಿಸಲಿದೆ ಎಂದರು.
ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಬ್ಲಾಕ್ ಅಧ್ಯಕ್ಷ ನಾಗೇಶ್‌ರೆಡ್ಡಿ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಜಯಣ್ಣ, ಮುಖಂಡರಾದ ಪ್ರಭುಸ್ವಾಮಿ, ಯೂಸುಫ್, ಜಗದೀಶ್, ಮಲ್ಲೇಶ್, ನಾಗರಾಜ್, ಬಂಡೆ ಓಬಣ್ಣ, ರಾಜು, ಮಂಜಕ್ಕ, ಹನುಮಂತಪ್ಪ, ಶಿವಾರೆಡ್ಡಿ, ವಿಶ್ವನಾಥ್ ರೆಡ್ಡಿ, ಗೌರಸಮುದ್ರ ಓಬಣ್ಣ, ಮುದಿಯಪ್ಪ, ಬಸಣ್ಣ, ಕಾಟಯ್ಯ, ಶ್ರೀಕಾಂತ್ ಇದ್ದರು.