ಗುಡೇಕೋಟೆಯಲ್ಲಿ ಜಾನಪದ ವೈಭವ ಅನಾವರಣ

24,KHH-1P
Published on

ಗುಡೇಕೋಟೆ: ಗ್ರಾಮದ ಪ್ರಮುಖ ಬೀದಿಯಲ್ಲಿ ಸೋಮವಾರ ಜಾನಪದ ಕಲಾ ಲೋಕ ಮೇಳೈಸಿತ್ತು. ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ಕಲಾವಿದರು ಸಾಂಸ್ಕೃತಿಕ ಲೋಕ ಸೃಷ್ಟಿಸಿದ್ದರು. ಇದು ಒನಕೆ ಓಬವ್ವ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶೋಭಾಯಾತ್ರೆಯಲ್ಲಿ ಕಂಡುಬಂದ ಚಿತ್ರಣ.

ಶಿವಪಾರ್ವತಿ ದೇವಸ್ಥಾನದಿಂದ ಆರಂಭವಾದ ಜಾನಪದ ವಾಹಿನಿ (ಶೋಭಾಯಾತ್ರೆ) ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಕಲಾವಿದರು ಹೆಜ್ಜೆ ಹಾಕಿದರು. ರಾಜಗಾಂಭಿರ್ಯದಿಂದ ಎತ್ತಿನ ಗಾಡಿಗಳು ಸಾಗಿದವು. ಸಿಂಗಾರಗೊಂಡ ಎತ್ತಿನಗಾಡಿಗಳಲ್ಲಿ ತಾಯಿ ಭುವನೇಶ್ವರಿ, ಒನಕೆ ಓಬವ್ವ ಮತ್ತು ಗ್ರಾಮ ಪರಿಸರದಲ್ಲಿರುವ ಸ್ಮಾರಕಗಳು ಮತ್ತು ಕರಡಿಧಾಮದಲ್ಲಿರುವ ವನ್ಯಜೀವಿಗಳ ಸ್ಥಬ್ಧ ಚಿತ್ರಗಳ ಪ್ರದರ್ಶಿಸಲಾಯಿತು. ಮಾರ್ಗದಲ್ಲಿ ನಿಂತಿದ್ದ ಜನರು ಕೈಮುಗಿದು ಗೌರವ ಸಮರ್ಪಿಸಿದರು. ಜನರು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಕಾಲೇಜ್ ಅವರಣದ ಒನಕೆ ಓಬವ್ವ ವೇದಿಕೆವರೆಗೆ ಮೆರವಣಿಗೆ ನಡೆಯಿತು.

ಚೌಡಪುರದ ಮಲ್ಲಿಕಾರ್ಜುನ ತಂಡದ ಸಮಾಳ, ನಂದಿಧ್ವಜ ಕುಣಿತ, ಮಂಜುನಾಥ, ಈಶ್ವರಪ್ಪ ತಂಡದಿಂದ ಕೋಲಾಟ, ಓಬಳೇಶ್, ರಾಮಚಂದ್ರ, ರಾಮಣ್ಣ, ಬಸಪ್ಪ, ಕುದುರೆಡವು ರಾಜಣ್ಣ, ಮಾರಬನಹಳ್ಳಿ ಮಾರಪ್ಪ, ಇಮಡಾಪುರದ ಲಕ್ಷ್ಮೀ ಮಹಿಳಾ ತಂಡದ ಉರುಮೆ ವಾದ್ಯ ಮೆರವಣಿಗೆಗೆ ಮೆರುಗು ತಂದವು.

ಉಡುಪಿ ಹೃತಿಕ್ ತಂಡದ ಹುಲಿವೇಷ ಕುಣಿತ, ಸಿಡೇಗಲ್ಲು ರಾಜು ತಂಡವರ ಚೌಡಿಕಿ ವಾದನ, ಹಂಪಾಪಟ್ಟಣದ ನಾಗರಾಜ ಗಂಟೆ ತಂಡ ಜಾನಪದ ಕೈಚಳಕ ಬೆರಗು ಮೂಡಿಸಿತು. ಓಬಳಾಪುರ ಓಬಣ್ಣ ಮತ್ತು ಗುಡೇಕೋಟೆ ಸಿದ್ಧಮೂರ್ತಿ ತಂಡದ ಹಲಗೆ ವಾದನ, ಹರಪನಹಳ್ಳಿ ಮೂರ್ತಿ ಮತ್ತು ಕೂಡ್ಲಿಗಿ ಭಿಕ್ಷಾವತಿ ತಂಡದ ಹಗಲುವೇಷ ಕುಣಿತ, ಬೆಳ್ಳಕಟ್ಟೆ ಸಿದ್ದಪ್ಪ ತಂಡದ ಕಹಳೆ, ಸಿಡೇಗಲ್ಲು ಹೊನ್ನೂರಸ್ವಾಮಿ ತಂಡದಿಂದ ಚೌಡಿಕೆ ವಾದನ, ಶ್ರೀಧರ್ ಆಚಾರ್ ತಂಡದ ರಾಮಡೊಳ್ಳು, ಗೊಂಬೆ ಕುಣಿತ, ತಾಲೂಕಿನ 10 ಕೋಲಾಟ ತಂಡದ ಕೋಲಾಟ ನೃತ್ಯ, ಜಾನಪದ ಕುಣಿತ ಶೋಭಾಯಾತ್ರೆಗೆ ಮೆರುಗು ತಂದವು.

ಶೋಭಾಯಾತ್ರೆಯಲ್ಲಿ 48 ಕಲಾ ತಂಡಗಳು, ಗ್ರಾಮದ 20ಕ್ಕೂ ಹೆಚ್ಚು ಎತ್ತಿನಗಾಡಿಗಳು ಭಾಗವಹಿಸಿದ್ದವು. ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಜಾನಪದ ಕಲಾ ಮೆರವಣಿಗೆಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು, ತಹಸೀಲ್ದಾರ್ ಎಂ.ರೇಣುಕಾ, ತಾಪಂ ಇಒ ನರಸಪ್ಪ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಎನ್.ಟಿ.ತಮ್ಮಣ್ಣ, ಕೆಇಬಿ ಗೋವೀಂದಪ್ಪ, ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಪ್ರಮುಖರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net