

ಚಿತ್ರದುರ್ಗ: ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿ ಆಗಿದೆ. ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಭ್ರಮೆಯಲ್ಲಿ ಬಿಜೆಪಿ ಇದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ದೂರಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದು ಯುವಕರಿಗೆ ಬಿಜೆಪಿ ಆಡಳಿತದಿಂದ ಅನುಕೂಲ ಆಗಿದೆಯೆ? ನಾವೆಲ್ಲ ಹಿಂದುಗಳೇ, ಹಿಂದು ಧರ್ಮವನ್ನು ಬಿಜೆಪಿ ಖರೀದಿಸಿಲ್ಲ. ಮಂದಿರ ನಿರ್ಮಾಣ ಸಾಕು, ಮನೆ-ಮನ ಕಟ್ಟುವ ಕೆಲಸ ಆಗಬೇಕು ಎಂದರು.
ವಾಸಿಸಲು ಯೋಗ್ಯವಲ್ಲದ ಸ್ಥಳದಲ್ಲೂ ಬಡವರು ವಾಸವಿದ್ದಾರೆ. ಅಂಥವರ ಕಣ್ಣಿರು ಒರೆಸಲು, ಅವರಿಗೆ ಸೂರು ಕಟ್ಟಿಸಿ ಶ್ರೀರಾಮ ಮಂದಿರ ಅಂಥ ಹೆಸರಿಡಿ, ಆಗ ರಾಮ ಆಶೀರ್ವದಿಸುತ್ತಾನೆ. ರಾಮನನ್ನು ಬಿಜೆಪಿಯವರು ವೋಟಿನ ರಾಮನನ್ನು ಮಾಡುವುದು ಬೇಡ ಎಂದು ಕಿವಿಮಾತು ಹೇಳಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ನಾನು ಟಿಕೆಟ್ ಕೇಳುವುದಿಲ್ಲ. ನಾವೆಲ್ಲ ಪಕ್ಷದ ಶಿಸ್ತಿನ ಸಿಪಾಯಿಗಳು. ಪಕ್ಷ ಯಾರನ್ನು ಅಭ್ಯರ್ಥಿ ಎಂದು ಘೋಷಿಸುತ್ತದೆಯೋ ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಹೊರುತ್ತೇವೆ. 2023ರಲ್ಲಿ ಕಾಂಗ್ರೆಸ್ಸಿಗೆ ರಾಜ್ಯದ ಜನರು ಅಧಿಕಾರ ಕೊಟ್ಟಿದ್ದಾರೆ. ಈಗ ಲೋಕಸಭೆಯಲ್ಲೂ ನಮ್ಮ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಡಿ.ಎ ನ್.ಮೈಲಾರಪ್ಪ, ಸಂಪತ್‌ಕುಮಾರ್, ಲಕ್ಷ್ಮೀಕಾಂತ್, ಪ್ರಕಾಶ್ ರಾಮನಾಯ್ಕ, ಎನ್.ಡಿ.ಕುಮಾರ್ ಇದ್ದರು.
*ಕೂಗಿದವರು ಕಾರ್ಯರ್ತರಲ್ಲ
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಈಚೆಗೆ ನಗರಕ್ಕೆ ಭೇಟಿ ಕೊಟ್ಟಿದ್ದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೆದುರು ಹೊರಗಿನವರಿಗೆ ಟಿಕೆಟ್ ಬೇಡ ಎಂದು ಹೇಳಿದವರು ನಮ್ಮ ಪಕ್ಷದ ಕಾರ‌್ಯಕರ್ತರಲ್ಲ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು. ಕೆಪಿಸಿಸಿಯಲ್ಲಿ ಮೂರು ಪ್ರಮುಖ ಸ್ಥಾನಗಳು ನಮ್ಮ ಜಿಲ್ಲೆಗೆ ದೊರಕಿದ್ದು, ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಪಕ್ಷದ ಗೆಲುವು ಮುಖ್ಯ ಎಂದು ಹೇಳಿದರು.