

ಚಿತ್ರದುರ್ಗ: ಕ್ರೀಡೆ ಶಿಕ್ಷಣದ ಅವಿಭಾಜ್ಯಅಂಗ,ಎಲ್ಲ ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು,ಕ್ರೀಡೆ ಶಿಸ್ತು ಹಾಗೂ ಬದ್ಧತೆಗೆ ನೆರವಾಗುತ್ತದೆ ಎಂದು ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು.
ಜಿಲ್ಲಾಡಳಿತ,ಜಿಪಂ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ, 14 ಮತ್ತು 17 ವರ್ಷದೊಳಗಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ,ಬಾಲಕಿಯರ ಹಾಗೂ ಅಂಗವಿಕಲ ಮಕ್ಕಳ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ,ಆದರೆ ಭಾಗವಹಿಸುವುದು ಮುಖ್ಯ. ಕ್ರೀಡೆ ಮಕ್ಕಳಲ್ಲಿ ಉತ್ಸಾಹ ಮೂಡಿಸುವುದರೊಂದಿಗೆ, ಅವರ ದೈಹಿಕ,ಮಾನಸಿಕ ಸಾಮರ್ಥ್ಯವೃದ್ಧಿಗೂ ಸಹಕಾರಿಯಾಗಿದೆ. ಈಚಿನ ದಿನಗಳಲ್ಲಿ ಯುವ ಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ದುಶ್ಚಟಗಳಿಂದ ದೂರವುಳಿದು, ಕ್ರೀಡಾಸಕ್ತಿ ಬೆಳೆಸಿಕೊಂಡು,ರಾಜ್ಯ,ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಆಶಯ ವ್ಯಕ್ತಪಡಿಸಿದರು.
ಡಿಡಿಪಿಐ ಎಂ.ಆರ್.ಮಂಜುನಾಥ್ ಮಾತನಾಡಿ,ಈ ದೇಶದ ಸಂಪತ್ತಾಗಿರುವ ಯುವ ಜನರು ದೈಹಿಕ ಮತ್ತು ಮಾನಸಿಕವಾಗಿ ಆ ರೋಗ್ಯವಾಗಿರಬೇಕೆಂದರು. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದ ಜಿಲ್ಲೆಯ ಆರು ತಾಲೂಕುಗಳ 14 ಮತ್ತು 17 ವರ್ಷ ದೊಳಗಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. 100ಮೀ,200ಮೀ,400 ಮೀ,800ಮೀ ಹಾಗೂ 1500ಮೀ ಓಟ,ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ ಹಾಗೂ ಜಾವೆಲಿನ್ ಥ್ರೋ ಸೇರಿದಂ ತೆ ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್,ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ್,ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಕರು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.