ಕೊನೆ ಉಸಿರಿನವರೆಗೂ ಮುಧೋಳ ನಂಟು..!

BKT-24-12
ಬಾಗಲಕೋಟೆ ನಗರದ ನ್ಯೂ ಐಬಿಯಲ್ಲಿ ಸಚಿವ ಗೋವಿಂದ ಕಾರಜೋಳ ಅವರು ಶನಿವಾರ ತಮ್ಮನ್ನು ಭೇಟಿ ಮಾಡಿದ ಸಾರ್ವಜನಿಕರ ಅಹವಾಲು ಆಲಿಸಿದರು.
Published on

ಬಾಗಲಕೋಟೆ: ನನ್ನ ಕೊನೆ ಉಸಿರು ಇರುವವರೆಗೂ ಮುಧೋಳದ ನಂಟು ನನ್ನ ಜೊತೆ ಇದ್ದೇ ಇರುತ್ತದೆ. ಅದು ಎಲ್ಲೂ ಹೋಗಲ್ಲ. ನಾನು ನನ್ನ ಜೀವನದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಮುಧೋಳ ಕ್ಷೇತ್ರ ಮಾತ್ರ. ಯಾವುದೇ ಕಾರಣಕ್ಕೂ ಆ ಕ್ಷೇತ್ರ ಬಿಟ್ಟು ಬೇರೆ ಎಲ್ಲೂ ಹೋಗಲ್ಲ.
ರನ್ನನಾಡು ಮುಧೋಳ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ರಾಜಕೀಯ ಮಾಡಿಕೊಂಡು ಬಂದಿರುವ ಜಲಸಂಪನ್ಮೂಲ ಸಚಿವ ಈ ರೀತಿ ಬಾವುಕರಾಗಿ ಹೇಳಿದರು.
ಬಾಗಲಕೋಟೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಧೋಳ ಕ್ಷೇತ್ರ ಪುತ್ರನಿಗೆ ಬಿಟ್ಟು, ತಾವು ಬೇರೆ ಕ್ಷೇತ್ರ ನೋಡುತ್ತಿದ್ದಂತೆ ಎನ್ನುವ ಪ್ರಶ್ನೆಗೆ ಬಾವುಕರಾದರು ಸಚಿವ ಕಾರಜೋಳ.
ನಾನು ಮುಧೋಳ ಬಿಟ್ಟು ಬೇರೆ ಕ್ಷೇತ್ರ ನೋಡುತ್ತಿದ್ದೇನೆ ಎಂದು ಎಲ್ಲೂ ಹೇಳಿಲ್ಲ. ಆದರೆ, ಈ ವದಂತಿ ಹೇಗೆ ಹರಡಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ನಕ್ಕ ಕಾರಜೋಳ, ಮುಂದಿನ ನನ್ನ ರಾಜಕೀಯ ನಿರ್ಣಯ ನನ್ನ ಕೈಯಲ್ಲಿ ಇಲ್ಲ. ಅದನ್ನು ಪಕ್ಷ ತೆಗೆದುಕೊಳ್ಳುತ್ತದೆ ಎನ್ನುವ ಮೂಲಕ ಚಂಡನ್ನು ಹೈಕಮಾಂಡ್ ಅಂಗಳದತ್ತ ಎಸೆದರು.
ಎಲ್ಲಿ ನನ್ನ ಉಪಯೋಗ ಮಾಡಿಕೊಳ್ಳಬೇಕು? ಎಲ್ಲಿ ನಿಲ್ಲಿಸಬೇಕು? ಇದೆಲ್ಲವೂ ಪಕ್ಷದ ಕೈಯಲ್ಲಿದೆ. ನನಗೆ ಚುನಾವಣೆ ನಿಲ್ಲಿಸಬೇಕೋ ಅಥವಾ ಪೂರ್ಣಾವಧಿಯಲ್ಲಿ ಪಕ್ಷ ಕೆಲಸ ಮಾಡಬೇಕು ಎಂದರೆ ಅದಕ್ಕೆ ನಾನು ಬದ್ದನಿದ್ದೇನೆ. ಆದರೆ, ನನಗೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದರೆ ನಾನು ಮುಧೋಳ ಬಿಟ್ಟು ಬೇರೆಲ್ಲೂ ಹೋಗಲ್ಲ. ಈ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಿಂದ ಚುನಾವಣೆ ಎದುರಿಸುವುದಿಲ್ಲ. ನನ್ನ ಕೊನೆ ಉಸಿರುವ ಇರುವ ತನಕ ಮುಧೋಳದ ನಂಟು ನನ್ನ ಜೊತೆ ಇರುತ್ತದೆ ಎಂದು ಗದ್ಗಿದಿತರಾದರು.
ಆ ಮೂಲಕ ಗೋವಿಂದ ಕಾರಜೋಳ ಅವರು 2023ರ ವಿಧಾನಸಭೆ ಚುನಾವಣೆಗೆ ಮುಧೋಳ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಧಾರೆ ಎರೆದು ಅವರು ವಿಜಯಪುರ ಇಲ್ಲವೇ ಬೆಳಗಾವಿ ಜಿಲ್ಲೆಯ ಕ್ಷೇತ್ರಕ್ಕೆ ವಲಸೆ ಹೋಗಲಿದ್ದಾರೆ ಎಂದು ಪುಂಕಾನುಪುಂಕವಾಗಿ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net