

ಎನ್.ಆರ್.ಪುರ: ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 26 ಮಂಗನ ಕಾಯಿಲೆ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ತಾಲೂಕಿನ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಾದ ಬಾಳೆಹೊನ್ನೂರು ಹೋಬಳಿಯ ಕರ್ಕೇಶ್ವರ, ಐಬಿಸಿ ಎಸ್ಟೇಟ್, ಮೇಲ್ಪಾಲ್, ಕಾನೂರು, ಕಟ್ಟಿನಮನೆ, ಕಸಬಾ ಹೋಬಳಿಯ ಮಡಬೂರು ಸುತ್ತಮುತ್ತ ವಿವಿಧ ಹಳ್ಳಿಗಳಲ್ಲಿ ಒಟ್ಟು 47 ಉಣುಗು ಮಾದರಿಗಳನ್ನು ಸಂಗ್ರಹಿಸಿ ಶಿವಮೊಗ್ಗದ ಪರಮಾಣು ಕ್ರಿಮಿ ಪ್ರಯೋಗಶಾಲೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಸಾಂಕ್ರಾಮಿಕ ರೋಗ ಶಾಸ ತಜ್ಞ ವೇಣುಗೋಪಾಲ್ ಹೇಳಿದರು.
ತಾಲೂಕಿನ ವಿವಿಧೆಡೆ ಉಣುಗುಗಳ ಮಾದರಿ ಸಂಗ್ರಹಿಸಿ ಮಾಹಿತಿ ನೀಡಿ, ಮಂಗನ ಕಾಯಿಲೆ ಬಂದಿರುವಂತಹ ರೋಗಿಗಳ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಲಾಗಿದೆ. ಮಂಗನ ಕಾಯಿಲೆ ವೈರಸ್‌ನಿಂದ ಹರಡುತ್ತದೆ. ಸೋಂಕಿತ ಉಣುಗು ಮನುಷ್ಯನಿಗೆ ಕಚ್ಚುವುದರ ಮೂಲಕ ಕಾಯಿಲೆ ಕಂಡುಬರುತ್ತದೆ. ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಮೈಕೈ ನೋವು, ಜ್ವರ, ಹೊಟ್ಟೆ ನೋವು, ಹಸಿವಾಗದಿರುವುದು, ಕಣ್ಣು ಕೆಂಪಾಗುವುದು, ವಸಡಿನಲ್ಲಿ ರಕ್ತಸ್ರಾವ, ಮಲದಲ್ಲಿ ರಕ್ತ ಕಂಡುಬರುವುದು ಈ ಕಾಯಿಲೆಯ ಲಕ್ಷಣ. ಇಂಥ ಲಕ್ಷಣಗಳು ಕಂಡುಬಂದ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷಿಸಿದರೆ ಮರಣ ಸಂಭವಿಸುತ್ತದೆ ಎಂದರು.
ಕಾಡಿನ ಸುತ್ತಮುತ್ತ ಮಂಗಗಳು ಸಾಯುವುದು ಈ ಕಾಯಿಲೆ ಕಂಡುಬರುವ ಮುನ್ಸೂಚನೆ. ಕಾಡಿಗೆ ಮತ್ತು ತೋಟದ ಕೆಲಸಕ್ಕೆ ತೆರಳುವ ಸಾರ್ವಜನಿಕರು ಗ್ರಾಮಸ್ಥರು ಆರೋಗ್ಯ ಇಲಾಖೆಯಿಂದ ವಿತರಿಸಿರುವ ಡೆಾ ಆಯಿಲ್ ಅನ್ನು ಮೈಗೆ ಹಚ್ಚಿಕೊಂಡು ಕಾಡಿಗೆ ಹೋಗಬೇಕು. ಕಾಡಿನಿಂದ ಬಂದ ನಂತರ ಎಲ್ಲ ವಸ್ತ್ರಗಳನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು ಬಿಸಿಲಲ್ಲಿ ಒಣಗಿಸಿ ಉಪಯೋಗಿಸಬೇಕು. ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಮಾತನಾಡಿ, ಯಾವುದೇ ಮಂಗ ಸತ್ತರೆ ಕೂಡಲೇ ಸಮೀಪದ ಅರಣ್ಯ ಇಲಾಖೆ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಎನ್.ಆರ್.ಪುರ ತಾಲೂಕಿನಲ್ಲಿ ಇಲ್ಲಿಯವರೆಗೆ 459 ಸಂಶಯಾಸ್ಪದ ರೋಗಿಗಳ ರಕ್ತದ ಮಾದರಿಯ್ನು ಶಿವಮೊಗ್ಗ ಪರಮಾಣು ಕ್ರಿಮಿ ಪ್ರಯೋಗ ಶಾಲಾಗೆ ಕಳುಹಿಸಿದ್ದು, ಇದರಲ್ಲಿ ಒಟ್ಟು 26 ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಪ್ರಸ್ತುತ 22 ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನಾಲ್ಕು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ ಎಂದು ತಿಳಿಸಿದರು.
ಮೇಲ್ಪಾಲ್ ಆಸ್ಪತ್ರೆ ಡಾ. ಗಣೇಶ್ ಭಟ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗೇಂದ್ರಪ್ಪ, ಆರ್.ಕೇಶವಮೂರ್ತಿ, ಪಿ.ಕೆ.ಭಗವಾನ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಮಹಮ್ಮದ್ ಇಲಿಯಾಸ್, ಆಶಾ ಕಾರ್ಯಕರ್ತೆಯರು ಉಣುಗು ಸಂಗ್ರಹಿಸಿದರು.