

ಚಿತ್ರದುರ್ಗ: ಕಲ್ಪಿತ ನ್ಯಾಯಾಲಯ ಸ್ಪರ್ಧೆಯಿಂದ ವಕೀಲರಾಗುವ ಕಾನೂನು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಟಿ.ವೆಂಕಟೇಶ್‌ನಾಯ್ಕ ಹೇಳಿದರು. ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಕಲ್ಪಿ ತ ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು,ಇಂತಹ ಸ್ಪರ್ಧೆಗಳಲ್ಲಿ ಕಾನೂನು ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರ ಜ್ಞಾನ ಮತ್ತು ಕೌಶಲ ಹೆಚ್ಚುತ್ತದೆ,ಮುಂದೆ ವಕೀಲ ವೃತ್ತಿಯಲ್ಲಿ ತೊಡಗುವವರಿಗೂ ಅನುಕೂಲವಾಗಲಿದೆ. 2ನೇ ಬಾರಿಗೆ ಈ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಏರ್ಪಡಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
2012ರಲ್ಲಿ ಜಾರಿಗೆ ಬಂದಿರುವ ಪೋಕ್ಸೋ ಕಾಯಿದೆ,ಮಕ್ಕಳು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುವಂಥ ಅಪ ರಾಧಿಗಳಿಗೆ ತ್ವರಿತವಾಗಿ ಶಿಕ್ಷೆ ವಿಧಿಸಲು ಸಹಕಾರಿಯಾಗಿದೆ. ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ರಕ್ಷಣೆಗೆ ಯಾವೆಲ್ಲ ಕಾಯಿದೆಗಳಿವೆ,ಅಪ್ರಾಪ್ತ ಮಕ್ಕಳು ಎದುರಿಸುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಪೋಕ್ಸೋ ಕಾಯಿದೆಯಡಿ ಹೇಗೆ ರಕ್ಷಣೆ ಇದೆ ಎಂಬುದನ್ನು ನ್ಯಾಯಮೂರ್ತಿ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ,ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಅವರು ಮಾತನಾಡಿ,ಇದು ಸ್ಪರ್ಧಾತ್ಮಕ ಯುಗ,ಜೀವನದಲ್ಲಿ ಯಶಸ್ಸನ್ನು ಪಡೆಯಲು ಪೈಪೋಟಿ ಅಗತ್ಯವಿದೆ. ಆದರೆ ಪೈಪೋಟಿಯಲ್ಲಿ ದ್ವೇಷವಿರದೆ ಗೆಲ್ಲುವ ಛಲವಿರ ಬೇಕು. ರಾಜ್ಯದ ವಿವಿಧ ಜಿಲ್ಲೆಗಳ 37 ಕಾಲೇಜುಗಳಿಂದ ಕಾನೂನು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸ್ಪರ್ಧೆ ಎಂದ ಮೇ ಲೆ ಗೆಲ್ಲಬೇಕೆಂದು ಎಲ್ಲರಿಗೂ ಆಸೆಯಿರುತ್ತದೆ ಎಂದರು. ಉಪಾಧ್ಯಕ್ಷ,ಹಿರಿಯ ವಕೀಲ ಫಾತ್ಯರಾಜನ್,ಕಾರ‌್ಯದರ್ಶಿ ಡಿ.ಕೆ.ಶೀಲಾ,ಪ್ರಾ ಚಾರ‌್ಯೆ ಪ್ರೊ.ಎಂ.ಎಸ್.ಸುಧಾದೇವಿ ಇತರರು ಇದ್ದರು.