ಕಸ ವಿಲೇವಾರಿಗೆ ಪುರಸಭೆಯಲ್ಲಿಲ್ಲ ವಾಹನ!

Published on

StartFragment

ರೋಣ: ಕಸ ವಿಲೇವಾರಿಗೆ ವಾಹನಗಳಿಲ್ಲದ ಪುರಸಭೆ ಯಾವುದಾದರೂ ಇದ್ದರೆ ಅದು ರೋಣ ಪುರಸಭೆ ಎಂದು ಹೇಳಲು ಮುಜುಗರವಾಗುತ್ತದೆ. ಈ ಹಿಂದಿನ ವ್ಯವಸ್ಥೆ ಕೆದಕುತ್ತ ಹೋದರೆ ಕೆಸರು ಬಿಟ್ಟು ಏನೂ ಕಾಣಿಸುವುದಿಲ್ಲ ಎಂದು ಮುಖ್ಯಾಧಿಕಾರಿ ನೂರುಲ್ಲಾಖಾನ್ ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆಯಲ್ಲಿ ಗುರುವಾರ ಜರುಗಿದ 2020-21ನೇ ಬಜೆಟ್ ಅಧಿವೇಶನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸದಸ್ಯ ಗುರುನಾಥ ಕೊಪ್ಪದ ಮಾತನಾಡಿ, ಪಟ್ಟಣದ ಬಹುತೇಕ ವಾರ್ಡ್​ಗಳು ಸೇರಿ ಮಾರುಕಟ್ಟೆ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿದ್ದು, ಇದರ ವಿಲೇವಾರಿಗೆ ಬಜೆಟ್​ನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂಬುದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಈ ಹಿಂದೆ ಕಸ ವಿಲೇವಾರಿಗಾಗಿ 2000 ಡಬ್ಬಿಗಳನ್ನು ಖರೀದಿಸಲಾಗಿತ್ತು. ಅದರಲ್ಲಿ ಸದ್ಯಕ್ಕೆ 500 ರಷ್ಟು ಡಬ್ಬಿಗಳು ನಿಮಗೆ ಕಾಣ ಸಿಗುವುದಿಲ್ಲ. ಹಿಂದಿನದನ್ನು ಬಿಟ್ಟು ಮುಂದೆ ಏನು ಮಾಡಬೇಕು ಎಂಬುದರ ಬಗೆಗೆ ಸಲಹೆ ಸೂಚನೆ ನೀಡಿ ಎಂದರು.

ಮಹಿಳಾ ಶೌಚಗೃಹಗಳು ಇಲ್ಲದಿರುವ ಕುರಿತು ಉತ್ತರಿಸಿದ ಮುಖ್ಯಾಧಿಕಾರಿ, ಈ ಹಿಂದಿನ ಅವಧಿಯಲ್ಲಿ ಪಟ್ಟಣದಲ್ಲಿ 4000 ಶೌಚಗೃಹಗಳನ್ನು ನಿರ್ವಿುಸಿರುವುದಾಗಿ ಪುರಸಭೆಯಿಂದ ವಿವಿಧ ಯೋಜನೆಗಳಲ್ಲಿ ಬಿಲ್ ಸಂದಾಯವಾಗಿದೆ. ಈಗ ನಮಗೆ ಯಾವುದೇ ಯೋಜನೆಗಳಲ್ಲಿ ಶೌಚಗೃಹ ನಿರ್ವಿುಸಿಕೊಳ್ಳುವ ಅವಕಾಶಗಳಿಲ್ಲ. ಹಾಗಾಗಿ ಈ ಹಿಂದಿನ ಅವಧಿಯಲ್ಲಿ ಪಟ್ಟಣದಲ್ಲಿ ನಿರ್ವಿುಸಿಕೊಂಡಿರುವ ಶೌಚಗೃಹಗಳ ತನಿಖೆ ನಡೆಸಲು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ. ತನಿಖೆ ನಂತರ ಸತ್ಯ ಹೊರಬಂದು ಸರ್ಕಾರ ಅವಕಾಶ ನೀಡಿದರೆ ನಿಮಗೆ ಶೌಚಗೃಹ ಭಾಗ್ಯ ಬರಲಿದೆ ಎಂದು ಉತ್ತರಿಸಿದರು.

ಮುಖ್ಯಾಧಿಕಾರಿ, ನೆರೆ ಹಾವಳಿಯಾದಾಗ ಚೋಳಚಗುಡ್ಡದ ಬಳಿಯ ಕುಡಿಯುವ ನೀರಿನ ಜಾಕ್​ವೆಲ್ ಹಾನಿಯಾಗಿ ವಿದ್ಯುತ್ ನಿಲುಗಡೆಯಾಗಿತ್ತು, ಇದರಿಂದ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ಅದನ್ನು ಸರಿಪಡಿಸುವಂತೆ ವಿನಂತಿಸಿದರೂ ತಿಂಗಳು ಕಳೆದರೂ ಅವರಿಂದ ಸರಿಪಡಿಸಲಾಗಿಲ್ಲ ಎಂದು ಆರೋಪಿಸಿದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗೂಡಂಗಡಿಗಳನ್ನು ತೆರವುಗೊಳಿಸಬೇಕು. ಪಟ್ಟಣದ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲಿಯೇ ಸಂಚರಿಸುವಂತಾಗಿದೆ. ಇದರಿಂದ ಪ್ರತಿದಿನ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಎಲ್ಲ ಸರ್ಕಲ್​ಗಳಲ್ಲಿ ಪೊಲೀಸರನ್ನು ನಿಯುಕ್ತಿಗೊಳಿಸುವಂತೆ ನೋಡಿಕೊಳ್ಳಬೇಕು. ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ನೀಡಿದರು.

ಅಕ್ರಮ ಮರಳು ಸಾಗಣೆ ತಡೆಯಿರಿ

ರಾತ್ರಿಯಾದರೆ ಅಕ್ರಮ ಮರಳು ಸಾಗಾಟದ ಟ್ರ್ಯಾಕ್ಟರ್ ಹಾವಳಿಯಿಂದ ಹೆಚ್ಚಾಗುತ್ತದೆ. ರಾತ್ರಿ ಪೊಲೀಸರ ಕಣ್ಣು ತಪ್ಪಿಸಿ ಓಣ್ಣಿಯಲ್ಲಿ ಯರ್ರಾಬಿರ್ರಿಯಾಗಿ ಟ್ರ್ಯಾಕ್ಟರ್ ಚಲಾಯಿಸುವುದರಿಂದ ನಮಗೆ ನೆಮ್ಮದಿ ಇಲ್ಲವಾಗಿದೆ ಎಂದು 22 ನೇ ವಾರ್ಡ್ ಸದಸ್ಯ ಹನುಮಂತಪ್ಪ ತಳ್ಳಿಕೇರಿ ಮುಖ್ಯಾಧಿಕಾರಿ ಎದುರು ಅಳಲು ತೋಡಿಕೊಂಡರು. ಬಹುತೇಕ ಸದಸ್ಯರು ಹಾಗೂ ಸಾರ್ವಜನಿಕರು ಇದಕ್ಕೆ ಧ್ವನಿಗೂಡಿಸಿದರು. ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ನೂರುಲ್ಲಾಖಾನ್, ಅಕ್ರಮ ಮರಳು ತಡೆಗಟ್ಟುವುದು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಜವಾಬ್ದಾರಿ ನಮಗೆ ಸಂಬಂಧಿಸಿದಲ್ಲ. ನೀವೊಬ್ಬ ಚುನಾಯಿತ ಪ್ರತಿನಿಧಿಯಾಗಿದ್ದು, ರಾತ್ರಿ ವೇಳೆ ಅಕ್ರಮ ಮರಳು ಸಾಗಿಸುವ ಟ್ರ್ಯಾಕ್ಟರ್​ಗಳನ್ನು ತಡೆದು ಬುದ್ಧಿ ಹೇಳಬಹುದಲ್ಲ ಎಂದರು. ಇದಕ್ಕೆ ಉತ್ತರಿಸಿದ ತಳ್ಳಿಕೇರಿ, ಟ್ರ್ಯಾಕ್ಟರ್​ನಲ್ಲಿ ಅಕ್ರಮ ಮರಳು ಸಾಗಿಸುತ್ತಿರುವವರು ಪ್ರಭಾವಿ ವ್ಯಕ್ತಿಗಳಾಗಿದ್ದು, ನಮಗೆ ಧಮ್ಕಿ ನೀಡುತ್ತಾರೆ. ಹೀಗಾಗಿ ನೀವೇ ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಿಸಿ ಪುಣ್ಯಕಟ್ಟಿಕೊಳ್ಳುವಂತೆ ಮನವಿ ಮಾಡಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net