

ಕೂಡ್ಲಿಗಿ: ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಸಂಜನಾಬಾಯಿ ಅವರ ಗುಂಡಾ ರೈಲು ನಿಲ್ದಾಣ ಗ್ರಾಮದ ಮನೆಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಬುಧವಾರ ಭೇಟಿ ನೀಡಿ ಸಂಜನಾಬಾಯಿ ಹಾಗೂ ಅವರ ತಂದೆ ರಾಮನಾಯ್ಕ, ತಾಯಿ ಕಾವೇರಿಬಾಯಿಯನ್ನು ಸನ್ಮಾನಿಸಿದರು. ಸಂಜನಾಬಾಯಿಗೆ 25 ಸಾವಿರ ರೂ. ಹಾಗೂ ಲ್ಯಾಪ್‌ಟಾಪ್ ನೀಡಿದರು.
ಸಾಧನೆ ಮಾಡುವವರಿಗೆ ಬಡತನ ಅಡ್ಡಿಯಾಗುವುದಿಲ್ಲ. ಎಂತಹ ಕಷ್ಟಗಳು ಬಂದರೂ ಅವುಗಳನ್ನು ದಾಟಿ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಸಂಜನಾಬಾಯಿ ನಿದರ್ಶನವಾಗಿದ್ದಾರೆ. ನಮ್ಮ ತಂದೆ ಎನ್.ಟಿ.ಬೊಮ್ಮಣ್ಣ ಅವರು ಈ ಹಿಂದೆ ಶಾಸಕರಾಗಿದ್ದು, ಇಲ್ಲಿನ ಜನರ ಋಣ ನಮ್ಮ ಮೇಲಿದೆ. ಇದರಿಂದಾಗಿ ಸಂಜನಾಬಾಯಿ ಸಾಧನೆ ಮೆಚ್ಚಿ ಅವರನ್ನು ಭೇಟಿಯಾಗಲು ಬಂದಿದ್ದೇನೆ. ಸಂಜನಾಬಾಯಿ ಮುಂದಿನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾದರೆ ನಾನು ನೆರವು ನೀಡುವುದಾಗಿ ಭರವಸೆ ನೀಡಿದರು.