ಕಲ್ಪಿತ ನ್ಯಾಯಾಲಯ ಸ್ಪರ್ಧೆ ವಿದ್ಯಾರ್ಥಿಗಳಿಗೆ ಅನುಕೂಲ

LAW
Published on

ಚಿತ್ರದುರ್ಗ: ನ್ಯಾಯಾಲಯದ ಕಲಾಪಗಳಲ್ಲಿ ಯಾವ ರೀತಿ ಕ್ರಿಯಾಶೀಲರಾಗಿರಬೇಕು. ಹೇಗೆ ತಯಾರಿ ನಡೆಸಿರಬೇಕೆಂಬ ಮಾಹಿತಿ ತಿಳಿಯಲು ಕಲ್ಪಿತ ನ್ಯಾಯಾಲಯ ಸ್ಪರ್ಧೆಗಳು ಕಾನೂನು ವಿದ್ಯಾರ್ಥಿ ಸಮೂಹಕ್ಕೆ ಅತ್ಯಂತ ಅನಿವಾರ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಟಿ.ವೆಂಕಟೇಶ್ ನಾಯ್ಕ ಹೇಳಿದರು.

ಸರಸ್ವತಿ ಕಾನೂನು ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹೊಸ ಕಾಯ್ದೆ, ಕಾನೂನುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಪ್ರತಿ ಸೆಕ್ಷನ್‌ಗಳ ಕುರಿತು ಮಾಹಿತಿ ಹೊಂದಿರಬೇಕು. ಆಳ ಮತ್ತು ಅತೀ ಹೆಚ್ಚಾದ ಅಧ್ಯಯನ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕತೆ ಮೈಗೂಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಾಧನೆಯತ್ತ ದಾಪುಗಾಲಿಡಬೇಕು. ಅಧ್ಯಯನದ ಅವಧಿಯಲ್ಲಿ ನಿಮ್ಮೊಳಗಿನ ಸಾಮರ್ಥ್ಯ ಅರಿತು ಇನ್ನಷ್ಟು ಗಟ್ಟಿಯಾಗಬೇಕು. ನೊಂದವರಿಗೆ ಸ್ಪಂದಿಸುವ, ನ್ಯಾಯ ಕೊಡಿಸುವ ಮಾನವೀಯ ಗುಣ ವಕೀಲರಾಗಲು ಇಚ್ಛಿಸುವವರಿಗೆ ತುಂಬಾ ಮುಖ್ಯ ಎಂದು ಕಿವಿಮಾತು ಹೇಳಿದರು.

ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ.ಸಿ.ಬಸವರಾಜು ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ವಕೀಲರಾಗಿ, ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುವಾಗ ಜವಾಬ್ದಾರಿ ಸ್ಥಾನದಲ್ಲಿ ಇರುವವರು ವೃತ್ತಿ ಧರ್ಮ ಶ್ರದ್ಧೆಯಿಂದ ಪಾಲಿಸಬೇಕು ಎಂದು ಸಲಹೆ ನೀಡಿದರು.

ಕಾನೂನು ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ, ಶಿಸ್ತು, ಕ್ರಿಯಾಶೀಲ ವ್ಯಕ್ತಿತ್ವ ತುಂಬಾ ಮುಖ್ಯ. ನಿತ್ಯವೂ ಅಧ್ಯಯನದಲ್ಲಿ ತೊಡಗಿ, ಹೆಚ್ಚಿನ ಜ್ಞಾನ ಸಂಪಾದನೆಯೊಂದಿಗೆ ಗುರಿ ತಲುಪಬೇಕು ಎಂದರು.

ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ, ಈ ಸ್ಪರ್ಧೆಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ವೃತ್ತಿ ಕೌಶಲ ಹೆಚ್ಚಿಸಲು ಸಹಕಾರಿಯಾಗಿದೆ. ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣದಲ್ಲಿ ನಿಮ್ಮ ಪಾತ್ರ ಹೆಚ್ಚಿದೆ ಎಂದು ಹೇಳಿದರು.

ಸರಸ್ವತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಕೆ.ಶೀಲಾ, ಸದಸ್ಯರಾದ ಚಂದ್ರಶೇಖರ್, ಆಡಳಿತಾಧಿಕಾರಿ ಪ್ರೊ.ನಟರಾಜ್, ಸರಸ್ವತಿ ಕಾನೂನು ಕಾಲೇಜಿನ ಪ್ರಾಚಾರ್ಯೆ ಡಾ.ಎಂ.ಎಸ್.ಸುಧಾ, ಪ್ರೊ.ಡಾ.ಎನ್.ಡಿ.ಗೌಡ, ಡಾ.ಕರಿಯಣ್ಣ, ಡಾ.ಮುರುಗೇಶ್, ಪ್ರೊ.ರವಿಕುಮಾರ್, ಪ್ರೊ.ಶ್ರೀಶೈಲಾ, ಪ್ರೊ.ಹರ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net