

ಶಿವಮೊಗ್ಗ: ಕರ್ನಾಟಕ ಹಾಗೂ ಮಧ್ಯಪ್ರದೇಶ ನಡುವಿನ ರಣಜಿ ಪಂದ್ಯಕ್ಕೆ ಇಲ್ಲಿನ ಕೆಎಸ್ಸಿಎ ಕ್ರೀಡಾಂಗಣ ಸಜ್ಜಾಗಿದೆ. ಫೆ.4ರಿಂದ 7ರವರೆಗೆ ಪಂದ್ಯ ನಡೆಯಲಿದೆ. ಪ್ರಸಕ್ತ ರಣಜಿ ಋತುವಿನಲ್ಲಿ 6 ಪಂದ್ಯಗಳಿಂದ 24 ಅಂಕ ಗಳಿಸಿ ಗುಂಪಿನಲ್ಲಿ 4ನೇ ಸ್ಥಾನದಲ್ಲಿರುವ ಕರ್ನಾಟಕ ಫೇವರಿಟ್ ಎನಿಸಿದೆ.
ಸೋಮವಾರ ಉಭಯ ತಂಡಗಳ ಆಟಗಾರರು ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸಿದರು. ಕರ್ನಾಟಕ ತಂಡದ ಕೋಚ್ ಯರ್ರೇಗೌಡ ತಂಡದ ಆಟಗಾರರಿಗೆ ಕೆಲ ಟಿಪ್ಸ್ ನೀಡುತ್ತಿದ್ದ ದೃಶ್ಯ ಕಂಡುಬಂತು. ಹಿಂದಿನ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಗೆಲುವು ಸಾಧಿಸಿರುವ ಕರ್ನಾಟಕ ತಂಡದ ಆಟಗಾರರು ಶಿವಮೊಗ್ಗ ಕೆಎಸ್ಸಿಎನಲ್ಲಿ ಪ್ರಸಕ್ತ ಋತುವಿನ 4ನೇ ಗೆಲುವು ದಾಖಲಿಸುವ ತವಕದಲ್ಲಿದ್ದಾರೆ.
ಮಧ್ಯಪ್ರದೇಶ ತಂಡ ಇದುವರೆಗೆ ಉತ್ತಮ ಸಾಧನೆ ತೋರಿಲ್ಲ. ಒಂದು ಗೆಲುವನ್ನೂ ದಾಖಲಿಸಿಲ್ಲ. ಹೀಗಾಗಿ ಈ ಪಂದ್ಯದ ಮೂಲಕ ಲಯಕ್ಕೆ ಮರಳುವ ಕಾತರದಲ್ಲಿದೆ. ಇಂದೊಂದು ಹೈ ವೋಲ್ಟೇಜ್ ಪಂದ್ಯವಾಗಿ ಪರಿವರ್ತನೆಯಾಗುವ ಎಲ್ಲ ಲಕ್ಷಣಗಳಿವೆ.
ಕರ್ನಾಟಕಕ್ಕೆ ನೆಚ್ಚಿನ ಪಿಚ್: ಶಿವಮೊಗ್ಗ ನವುಲೆ ಕೆಎಸ್ಸಿಎ ಕ್ರೀಡಾಂಗಣ ಕರ್ನಾಟಕ ತಂಡದ ನೆಚ್ಚಿನ ಪಿಚ್ ಎನಿಸಿದೆ. ಕರ್ನಾಟಕ ತಂಡ ಇದೀಗ ಮೂರನೇ ಪಂದ್ಯವನ್ನು ಇಲ್ಲಿ ಆಡುತ್ತಿದೆ. 2017ರಲ್ಲಿ ನಡೆದ ಮೊದಲ ರಣಜಿ ಪಂದ್ಯದಲ್ಲಿ ಪ್ರಬಲ ಎದುರಾಳಿ ಹೈದರಾಬಾದ್ ವಿರುದ್ಧ ಗೆಲುವಿನ ನಗೆ ಬೀರಿದ್ದ ಕರ್ನಾಟಕ 2018ರಲ್ಲಿ ರೈಲ್ವೇಸ್ ವಿರುದ್ಧ 176 ರನ್ಗಳ ಬೃಹತ್ ಗೆಲುವು ದಾಖಲಿಸಿತ್ತು.
ಕೆ.ಎಲ್.ರಾಹುಲ್ ಹಾಗೂ ಮನೀಷ್ ಪಾಂಡೆ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಆದರೂ ಕರುಣ್ ನಾಯರ್ ನೇತೃತ್ವದಲ್ಲಿ ಕರ್ನಾಟಕ ತಂಡ ಅತ್ಯಂತ ಸಮತೋಲಿತವಾಗಿದೆ. ಬೌಲಿಂಗ್ ಹಾಗೂ ಬ್ಯಾಂಟಿಂಗ್ನಲ್ಲಿ ಸ್ಥಿರತೆಯಿದೆ. ಹೀಗಾಗಿ ಕರ್ನಾಟಕ ತಂಡ ಶಿವಮೊಗ್ಗ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಿದೆ.
ರೋಚಕ ಹಣಾಹಣಿ ನಿರೀಕ್ಷೆ; ಬೌಲಿಂಗ್ನಲ್ಲಿ ಅಭಿಮನ್ಯು ಮಿಥುನ್, ರೋನಿತ್ ಮೊರೆ, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಕರ್ನಾಟಕಕ್ಕೆ ಆಸರೆಯಾಗಿದ್ದಾರೆ. ಮಧ್ಯಪ್ರದೇಶಕ್ಕೆ ನಾಯಕ ಶುಭಂ ಶರ್ವ, ವೇಗಿಗಳಾದ ಗೌರವ್ ಯಾದವ್, ವೆಂಕಟೇಶ್ ಅಯ್ಯರ್ ಶಕ್ತಿ ತುಂಬುವ ನಿರೀಕ್ಷೆ ಇದೆ. ಸತತ 3ನೇ ವರ್ಷವೂ ಶಿವಮೊಗ್ಗ್ಗಲ್ಲಿ ರಣಜಿ ಪಂದ್ಯಾವಳಿ ನಡೆಯುತ್ತಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ತಂದಿದೆ. ಹೀಗಾಗಿ ಪಂದ್ಯ ವೀಕ್ಷಣೆಗೆ ಜನಸಾಗರವೇ ಹರಿದುಬರುವ ಸಾಧ್ಯತೆಗಳಿವೆ.
ಪ್ರಸಕ್ತ ಋತುವಿನಲ್ಲಿ ಉಭಯ ತಂಡಗಳ ಸಾಧನೆ:
ಕರ್ನಾಟಕ: 6 ಪಂದ್ಯ, 3 ಗೆಲುವು- 3 ಡ್ರಾ: 24 ಅಂಕ
ಮಧ್ಯಪ್ರದೇಶ: 6 ಪಂದ್ಯ, 2 ಸೋಲು- 4 ಡ್ರಾ: 8 ಅಂಕ
ಕರ್ನಾಟಕ ತಂಡ: ಕರುಣ್ ನಾಯರ್(ನಾಯಕ), ಬಿ.ಆರ್.ಶರತ್(ವಿಕೀ), ಆರ್.ಸಮರ್ಥ್, ರೋಹನ್ ಕದಂ, ದೇವದತ್ತ ಪಡಿಕ್ಕಲ್, ಪವನ್ ದೇಶಪಾಂಡೆ, ಎಸ್.ಗೋಪಾಲ್, ಎ.ಮಿಥುನ್, ರೋನಿತ್ ಮೋರೆ, ವಿ.ಕೌಶಿಕ್, ಪ್ರತೀಕ್ ಜೈನ್, ಕೆ.ವಿ.ಸಿದ್ಧಾರ್ಥ್, ಪ್ರವೀಣ್ ದುಬೆ, ಕೆ.ಗೌತಮ್
ಮಧ್ಯಪ್ರದೇಶ ತಂಡ: ಶುಭಂ ಶರ್ವ(ನಾಯಕ), ಅಜಯ್ ರೊಹೆರಾ(ವಿಕೀ), ಯಶ್ ದುಬೆ, ರಮೀಝå್ ಖಾನ್, ಗೌತಮ್ ರಘುವಂಶಿ, ಆನಂದ್ ಸಿಂಗ್, ರಜತ್ ಪಾಟೀದಾರ್, ಆದಿತ್ಯ ಶ್ರೀವಾಸ್ತವ, ಕುಮಾರ್ ಕಾರ್ತಿಕೇಯ ಸಿಂಗ್, ಮಿಹಿರ್ ಹಿರ್ವಾನಿ, ಗೌರವ್ ಯಾದವ್, ರವಿ ಯಾದವ್, ವೆಂಕಟೇಶ್ ಅಯ್ಯರ್, ಕುಲದೀಪ್ ಸೇನ್