

ಕಂಪ್ಲಿ: ಪಟ್ಟಣದ ಚಿಕ್ಕಜಾಯಿಗನೂರು ಮಾರ್ಗದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ಸಂಗ್ರಹಿಸಿರುವ ಜೋಳದ ದಾಸ್ತಾನನ್ನು ಕೇಂದ್ರ ಉಗ್ರಾಣ ನಿಗಮದ ಜಾಗೃತ ದಳದ ಅಧಿಕಾರಿ ಎಸ್.ಎಂ.ಶಿವಕುಮಾರ್ ಮಂಗಳವಾರ ಪರಿಶೀಲಿಸಿದರು.
ಗುಣಮಟ್ಟದ ಜೋಳ ಖರೀದಿಸಿ ದಾಸ್ತಾನು ಮಾಡಬೇಕಿದೆ. ಜೋಳದ ಗುಣಮಟ್ಟ ಕಾಪಾಡಲು ಪಾಲಿಥೀನ್ ಹಾಳೆ ಹಾಕುವುದು, ಔಷಧ ಸಿಂಪಡಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಉಗ್ರಾಣ 28 ಸಾವಿರ ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಕಂಪ್ಲಿ, ಸಿರಗುಪ್ಪ, ಕರೂರು, ಬಳ್ಳಾರಿ, ಹಚ್ಚೊಳ್ಳಿ, ಸಿಂಧನೂರು ಭಾಗದ ಏಳು ಸಾವಿರ ಮೆಟ್ರಿಕ್ ಟನ್ ಜೋಳ ಸಂಗ್ರಹಿಸಲಾಗಿದೆ. ಮುಂದಿನ ತಿಂಗಳಿನಿಂದ ಪಡಿತರ ಚೀಟಿದಾರರಿಗೆ ವಿತರಿಸಲು ಇಲ್ಲಿ ದಾಸ್ತಾನು ಮಾಡಿರುವ ಜೋಳ ಬಳಸಲಾಗುವುದು ಎಂದು ಎಸ್.ಎಂ.ಶಿವಕುಮಾರ್ ಹೇಳಿದರು.
ಉಗ್ರಾಣದ ವ್ಯವಸ್ಥಾಪಕ ಅಂಬರೀಶ್, ಎಎಸ್‌ಐ ಎಚ್.ಗಂಗಣ್ಣ, ಉಗ್ರಾಣ ನಿಗಮದ ಸಿಬ್ಬಂದಿ ಶ್ವೇತಾ, ಜಾಧವ್, ಸೋಮಶೇಖರ್ ಇತರರಿದ್ದರು.