

ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಭಾರಿ ಮಳೆಗೆ ಸಾತ್ಕೋಳಿ ಹಳ್ಳದಲ್ಲಿ ಎರಡು ಹಸುಗಳು ಕೊಚ್ಚಿಕೊಂಡು ಹೋಗಿವೆ.
ಸಾತ್ಕೋಳಿ ಗ್ರಾಮದ ಮಾರ್ಗ ಮಧ್ಯೆ ಹಳ್ಳ ಇದ್ದು, ಹಳ್ಳಕ್ಕೆ ಸಣ್ಣ ಪೈಪುಗಳು ಹಾಕಿ ಮೋರಿ ಮಾತ್ರ ನಿರ್ಮಿಸಲಾಗಿದೆ. ಮಳೆ ಜೋರಾಗಿ ಬಂದಾಗ ಪೈಪಿನಲ್ಲಿ ನೀರು ಹೋಗಲು ಸಾಧ್ಯವಾಗದೆ ಉಕ್ಕಿ ರಸ್ತೆ ಮೇಲೆ ಹರಿಯುತ್ತದೆ. ಗ್ರಾಮದ ಜಾನುವಾರುಗಳು ಕಾಡಿನಲ್ಲಿ ಮೇಯ್ದು ವಾಪಸ್ ಈ ರಸ್ತೆಯಲ್ಲಿ ಸಾಗುವಾಗ ಸಂಜೆ 5 ಗಂಟೆ ಹೊತ್ತಿಗೆ ನಾಗೇಶ ಅವರ ಎರಡು ಹಸುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇದೇ ಹಳ್ಳದಲ್ಲಿ ಕೆಲವು ವಷರ್ಗಳ ಹಿಂದೆ ಮಳೆಯಿಂದಾಗಿ ಕಾರು ಹಳ್ಳಕ್ಕೆ ಬಿದ್ದು ಒಬ್ಬರು ಮೃತಪಟ್ಟಿದ್ದರು.
ಇನ್ನು ಮಳೆಗೆ ಸಾತ್ಕೋಳಿಯ ರಾಮಣ್ಣ, ಗಂಗಣ್ಣ, ಪುಟ್ಟಸ್ವಾಮಿ, ಲಿಂಗಣ್ಣ ಮುಂತಾದವರ ಅಡಕೆ ತೋಟದ ಮೇಲೆ ಹಳ್ಳದ ನೀರು ಹರಿದು ತೋಟಗಳು ಹಾಳಾಗಿವೆ. ಗ್ರಾಮದ ಮಂಜುನಾಥ, ನಾಗರತ್ನಾ, ನಾಗಪ್ಪ, ಕೃಷ್ಣಪ್ಪ ಎಂಬುವರ ಗದ್ದೆಗಳ ಮೇಲೆ ನೀರು ಹರಿದು ಭತ್ತದ ಪೈರು ಹಾಳಾಗಿದೆ.