

ಸರಗೂರು: ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ಶೂ ಎಸೆಯಲು ಯತ್ನಿಸಿದ ಪ್ರಕರಣವನ್ನು ವಿರೋಧಿಸಿ ಸೋಮವಾರ ಪಟ್ಟಣದಲ್ಲಿ ಆದಿಕರ್ನಾಟಕ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ ಮಾತನಾಡಿ, ಅಕ್ಟೋಬರ್ 6ರಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಪೀಠದಲ್ಲಿ ಕುಳಿತು ತೀರ್ಪೊಂದನ್ನು ಪ್ರಕಟಿಸಿದ ಸಂದರ್ಭದಲ್ಲಿ, ತೀರ್ಪನ್ನು ವಿರೋಧಿಸಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದಿದ್ದಾನೆ. ಈ ಘಟನೆಯಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದರು.
ಆದಿಕರ್ನಾಟಕ ಮಹಾಸಭಾ ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಬಿ.ಆರ್.ಗವಾಯಿ ಅವರು ಇತ್ತೀಚೆಗೆ ಇದೊಂದು ಮಾಸಿಹೋದ ಘಟನೆ ಎಂದು ಹೇಳಿಕೊಂಡಿದ್ದಾರೆ. ಅದು ಅವರ ದೂರದೃಷ್ಟಿ ಹಾಗೂ ತಾಯಿ ಹೃದಯವನ್ನು ಪ್ರದರ್ಶಿಸುತ್ತದೆ. ಆದರೆ ಭಾರತ ದೇಶದ ಪ್ರಜೆಗಳು ನ್ಯಾಯಾಲಯದ ಮೇಲೆ ನಂಬಿಕೆ ಉಳ್ಳುವವರು, ಸಂವಿಧಾನ ಸಂರಕ್ಷಕರು ಇದನ್ನು ಖಂಡಿಸದೆ, ಪ್ರಶ್ನಿಸದೆ ಇರಲಾಗದು ಎಂದರು.
ದಸಂಸ ಜಿಲ್ಲಾ ಸಂಚಾಲಕ ಕೋಟೆ ಬೆಟ್ಟಯ್ಯ ಮಾತನಾಡಿ, ಇಂತಹ ಕೋಮುವಾದಿಗಳು, ಕಾನೂನು ವಿರೋಧಿಗಳನ್ನು ಕ್ಷಮಿಸಿಬಿಟ್ಟರೆ ದೇಶದ ಕಾನೂನಿಗೆ ಬೆಲೆ ಇಲ್ಲದಂತಾಗುತ್ತದೆ. ಇಂತಹ ಕಿಡಿಗೇಡಿಗಳ ಉಪಟಳ ದೇಶದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇಡೀ ದೇಶವೇ ತಲೆ ತಗ್ಗಿಸುವಂತಹ ತಪ್ಪನ್ನು ಮಾಡಿರುವ ರಾಕೇಶ್ ಕಿಶೋರನ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜ್ಯನ್ಯ ತಡೆ ಕಾಯ್ದೆ ಮತ್ತು ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಇದಕ್ಕೂ ಮೊದಲು ಪಟ್ಟಣದ ಅಂಬೇಡ್ಕರ್ ಭವನದಿಂದ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಬಳಿ ಸರಪಳಿ ನಿರ್ಮಿಸಿ ವಕೀಲ ರಾಕೇಶ್ ಕಿಶೋರ್ ಪ್ರತಿಕೃತಿ ದಹಿಸಿ ಅದೇ ಮಾರ್ಗವಾಗಿ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ತಹಸೀಲ್ದಾರ್ ಮೋಹನಕುಮಾರಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಅವರಿಗೆ ರವಾನಿಸಲಾಗುವುದು ಎಂದರು.
ಸರಗೂರು ಗೌರವಾಧ್ಯಕ್ಷ ಇದಿಯಪ್ಪ, ಉಪಾಧ್ಯಕ್ಷ ನಾಗೇಂದ್ರ ದೇವಲಾಪುರ, ಚಿನ್ನಣ್ಣ, ಕಾಳಸ್ವಾಮಿ ಚಕ್ಕೂರು, ಪುಟ್ಟಸ್ವಾಮಿ ಮುಳ್ಳೂರು, ಶಿವಣ್ಣ ಬಿಡಗಲು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಾದನೂರು, ಸಹ ಕಾರ್ಯದರ್ಶಿ ಸೂರ್ಯಕುಮಾರ್ ಮಸಹಳ್ಳಿ, ಖಜಾಂಚಿ ಶ್ರೀನಿವಾಸ್ ಲಂಕೆ, ನಿರ್ದೇಶಕರಾದ ಹಾಲಯ್ಯ, ಪಾಪ ತೇರಣಿಮುಂಟಿ, ವೆಂಕಟಾಚಲ ಸಾಗರೆ, ಗೋವಿಂದರಾಜು ಕೊಡಗಿ, ಗೋವಿಂದರಾಜು ಹುನಗಹಳ್ಳಿ, ಶಿವಕುಮಾರ್ ನಂಜಿಪುರ, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ನಾಗರಾಜು ಚೆನ್ನಿಪುರ, ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಮಹೇಂದ್ರ ಹೂವಿನಕೊಳ, ಲೋಕೇಶ್ ಮುಳ್ಳೂರು, ಗ್ರಾಮೀಣ ಮಹೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಮಸಹಳ್ಳಿ ನವೀನ್, ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು, ಜಿಪಂ ಮಾಜಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ, ಕುಂದೂರು ಮೂರ್ತಿ,ಲಕ್ಷ್ಮಣ ಲಂಕೆ, ಸಣ್ಣಸ್ವಾಮಿ, ನಿಂಗರಾಜು, ಎಸ್.ಮರಿದೇವಯ್ಯ, ಶಿವು, ಅಡಹಳ್ಳಿ ಮಹದೇವ, ಸೋಮಣ್ಣ ಮತ್ತಿತರರು ಭಾಗವಹಿಸಿದ್ದರು.