

ಚಿತ್ರದುರ್ಗ: ಮೀಸಲು ಅರಣ್ಯ ವ್ಯಾಪ್ತಿಯಲ್ಲಿರುವ ಸಾಗುವಳಿದಾರರು, ಬುಡುಕಟ್ಟು ಸಮುದಾಯ, ಬಡವರ ಅನುಕೂಲಕ್ಕೆಂದು ಕೈಗೊಂಡಿರುವ ಅರಣ್ಯ-ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಭೋವಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಅರಣ್ಯ ವ್ಯಾಪ್ತಿಯಲ್ಲಿ 40-50 ವರ್ಷಗಳಿಗೂ ಅಧಿಕ ಕಾಲದಿಂದ ಉಳುಮೆ ಮಾಡುತ್ತಿರುವವರು, ಗುಡಿಸಲುಗಳಲ್ಲಿ ವಾಸವಿರುವ ಬಡವರು ಇದ್ದಾರೆ. ಸುಪ್ರೀಂಕೋರ್ಟ್‌ಗೆ ಸರಿಯಾಗಿ ಮನವರಿಕೆ ಮಾಡಿಕೊಡದೆ ಇರುವುದರಿಂದ ಉಳಿದಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. 3 ತಿಂಗಳ ಒಳಗೆ ಸಮೀಕ್ಷೆ ಪೂರ್ಣಗೊಳಿಸಲಾಗುವುದು ಎಂದರು.
ರಾಜ್ಯದಲ್ಲಿರುವ ಶೇ.21 ಅರಣ್ಯ ವಿಸ್ತೀರ್ಣವನ್ನು ಶೇ.33ಕ್ಕೆ ಹೆಚ್ಚಿಸುವ ಉದ್ದೇಶವಿದೆ. ಈ ವರ್ಷ ರಾಜ್ಯದಲ್ಲಿ 5 ಕೋಟಿ ಸಸಿಗಳ ನೆಡುವಿಕೆಯ ಕಾರ‌್ಯ ಯುದ್ಧೋಪಾದಿಯಲ್ಲಿ ನಡೆದಿದೆ. ಅರಣ್ಯ ಸಂರಕ್ಷಣೆ, ಜನರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಇದೆ. ಅರಣ್ಯ ಸಂರಕ್ಷಣೆ, ವನ್ಯಜೀವಿ ಹಾಗೂ ಪರಿಸರ ಕಾಯ್ದೆಗಳ ಪರಿಣಾಮಕಾರಿ ಜಾರಿ ಮೂಲಕ ಪರಿಸರ ಉಳಿಸಿಕೊಳ್ಳಬೇಕಿದೆ. ಅತಿಕ್ರಮಣ ತೆರವಿಗೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಸಮಸ್ಯೆಗಳ ಕುರಿತು ಶ್ರೀಗಂಧ ಬೆಳೆಗಾರರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆ ಸೋಲಿನಿಂದ ಹತಾಶೆಗೊಂಡಿರುವ ಬಿಜೆಪಿ, ಗ್ಯಾರಂಟಿಗಳ ವಿಚಾರದಲ್ಲಿ ಜನರನ್ನು ಕೆರಳಿಸುತ್ತಿದೆ. ಸರ್ಕಾರ ಕೊಟ್ಟ ಮಾತಗಳನ್ನು ಉಳಿಸಿಕೊಳ್ಳುತ್ತಿರುವುದು, ಬಿಜೆಪಿಗೆ ನಡುಕು ಹುಟ್ಟಿಸಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲೂ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮಾಜಿ ಸಚಿವ ಸಿ.ಟಿ.ರವಿ ಏನೇನೋ ಮಾತನಾಡುತ್ತಾರೆ. ಆದ್ದರಿಂದ ಅವರು ರಾಜಕಾರಣದಲ್ಲಿರಲು ಯೋಗ್ಯರಲ್ಲ ಎಂಬ ಕಾರಣಕ್ಕೆ ಜನ ಸೋಲಿಸಿದ್ದಾರೆ. ರವಿ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ಆಗುತ್ತಿರುವ ತೊಂದರೆಗೆಗೆ ಪ್ರತಿಕ್ರಿಯಿಸಿ, ಹೊಸ ಯೋಜನೆಗಳ ಅನುಷ್ಠಾನ ವೇಳೆ ಶೇ.1-2ರಷ್ಟು ಜನರಿಗೆ ಕೆಲ ಸಮಯದವರೆಗೆ ತೊಂದರೆ ಸಹಜ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆ ವಿರುದ್ಧ ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸಿದೆ. ಹೊರ ರಾಜ್ಯಗಳಿಂದ ಅಕ್ಕಿ ಖರೀದಿಗೆ ಸಮಾಲೋಚನೆ ನಡೆದಿದೆ. ಜನರಿಗೆ ಅಕ್ಕಿ ಕೊಡುತ್ತೇವೆ. ಆಗಸ್ಟ್ 1ರಿಂದ ಗೃಹಲಕ್ಷ್ಮೀ ಯೋಜನೆ ಜಾರಿಯಾಗಲಿದೆ ಎಂದು ಸಚಿವರು, ಮಠಗಳಿಗೆ ಸಸಿಗಳನ್ನು ಪೂರೈಸಲಾಗುವುದು ಎಂದರು.
ಡಿಸಿಎಫ್ ಟಿ.ರಾಜಣ್ಣ, ಹಿರಿಯೂರು ಎಸಿಎಫ್ ರಮೇಶ್, ಆರ್‌ಎಫ್‌ಒ ಉಷರಾಣಿ, ಡಿಆರ್‌ಎಫ್‌ಒ ಜೆ.ರವಿ, ಮುಖಂಡರಾದ ಮರಳಾರಾಧ್ಯ, ಗೌನಹಳ್ಳಿ ಗೋವಿಂದಪ್ಪ, ವೀರಶೈವ ಮಹಾಸಭಾ ಜಿಲ್ಲಾಕಾರ‌್ಯದರ್ಶಿ ಮಹೇಶ್ ಇತರರಿದ್ದರು.
*ಕೇಂದ್ರಕ್ಕೆ ಶಿಫಾರಸು
ವೀರಶೈವ ಲಿಂಗಾಯತ ಸಮಾಜದ ಎಲ್ಲ ಉಪ ಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಮಠಾಧೀಶರ ಬೇಡಿಕೆ ನ್ಯಾಯಯತವಾಗಿದೆ. ಈ ಕುರಿತಂತೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಈ ಹಿಂದೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಈಗಲೂ ಕೇಂದ್ರಕ್ಕೆ ಶಿಫಾರಸು ಕಳಿಸುವಂತೆ ನಮ್ಮ ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವುದಾಗಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಉಪಾಧ್ಯಕ್ಷರೂ ಆಗಿರುವ ಸಚಿವ ಖಂಡ್ರೆ ಭರವಸೆ ನೀಡಿದರು.
*ತಿದ್ದುಪಡಿಗೆ ಒತ್ತಾಯ
ಕಲ್ಲು ಕ್ವಾರಿಗೆ ಸರ್ಕಾರಿ ಭೂಮಿ ಕೊಟ್ಟರೆ ಅನುಕೂಲ. ಅರಣ್ಯ ಪ್ರದೇಶದಲ್ಲಿ ಕೈಯಿಂದ ಕಲ್ಲು ಒಡೆಯುವಂಥವರಿಗೆ ಅವಕಾಶ ಮಾಡಿ ಕೊಡಲು ಕಾನೂನಿಗೆ ತಿದ್ದುಪಡಿ ತರುವಂತೆ ಭೋವಿ ಶ್ರೀಗಳು ಸಚಿವರಿಗೆ ಮನವಿ ಮಾಡಿದರು.