

ವಿರಾಜಪೇಟೆ: ಅಂಗವಿಕಲರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಬಿಟ್ಟಂಗಾಲ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಸಿ.ವಿಶ್ವನಾಥ್ ಸಲಹೆ ನೀಡಿದರು.
ವಿರಾಜಪೇಟೆ ಬಳಿಯ ಬಿಟ್ಟಂಗಾಲ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂಗವಿಕಲರ ಸಮನ್ವಯ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಅಂಗವಿಕಲರಿಗೆ ಶೇ.5ರ ಅನುದಾನದಲ್ಲಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಸಾಮಾನ್ಯ ಜನರಂತೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರತಿಭೆ ಹೊರಹೊಮ್ಮಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೊಜನೆ ರೂಪಿಸಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಲ್ಲಿ ಸೌಲಭ್ಯ ಪಡೆದುಕೊಂಡು ಸ್ವ ಉದ್ಯೋಗ ಮೂಲಕ ಮುಂದೆ ಬರಬೇಕು ಎಂದು ಹೇಳಿದರು.
ಬೇಟೋಳಿ ಗ್ರಾಪಂನ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆ ಆಯೇಷಾ ಮಾತನಾಡಿ, ಸರ್ಕಾರ ಅಂಗವಿಕಲರಿಗಾಗಿ ವ್ಹೀಲ್‌ಚೇರ್, ದ್ವಿಚಕ್ರ ವಾಹನ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ವಿದ್ಯಾರ್ಥಿವೇತನ, ವೈದ್ಯಕೀಯ ವೆಚ್ಚ ನೀಡುತ್ತಿದೆ. ಕಣ್ಣಿನ ತೊಂದರೆ ಇದ್ದಲ್ಲಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಹಾಗೂ ಬುದ್ದಿಮಾಂದ್ಯ ಮಕ್ಕಳು ಮತ್ತು ವೃದ್ಧರಿಗೆ ಪಿಂಚಣಿ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ಜಾರಿಗೊಳಿಸಿದೆ ಎಂದು ಮಾಹಿತಿ ನೀಡಿದರು.
ಬಿಟ್ಟಂಗಾಲ ಗ್ರಾಪಂ ಅಧ್ಯಕ್ಷೆ ಟಿ.ಆರ್.ರಮ್ಯಾ, ಸಮುದಾಯ ಆರೋಗ್ಯಾಧಿಕಾರಿ ಸಂಗೀತಾ, ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆ ಹಸೀನಾ, ಸದಸ್ಯರಾದ ಎಂ.ಸುಬ್ಬಯ್ಯ, ಪದ್ಮವತಿ, ಕೆ.ಉತ್ತಪ್ಪ, ಸಿ.ಕಾವೇರಪ್ಪ, ಸಿ.ಬಿ.ಸೋಮಯ್ಯ, ಎನ್.ಬೋಪಣ್ಣ, ಕಾರ್ಯದರ್ಶಿ ಸತೀಶ್ ಮತ್ತು ಮಾಚಯ್ಯ ಇದ್ದರು.