

ಹುಬ್ಬಳ್ಳಿ: ವಿಆರ್ಎಲ್ ಲಾಜಿಸ್ಟಿಕ್, ವಿಜಯವಾಣಿ ಕನ್ನಡದ ನಂ. 1 ಪತ್ರಿಕೆ, ದಿಗ್ವಿಜಯ 24x7 ನ್ಯೂಸ್ ಚಾನೆಲ್, ಪವರ್ ನ್ಯೂಸ್ ಹಾಗೂ ಪತಂಜಲಿ ಯೋಗ ಪೀಠದ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಯೋಗಗುರು ಬಾಬಾ ರಾಮದೇವ ನೇತೃತ್ವದಲ್ಲಿ ಏರ್ಪಡಿಸಲಾಗಿರುವ ಯೋಗ ಶಿಬಿರದ ನಾಲ್ಕನೇ ದಿನದಲ್ಲಿ ಪ್ರಮುಖ ಗಣ್ಯರು ಭಾಗವಹಿಸಿದರು.
ವಿ.ಪ.ಸದಸ್ಯ ಬಸವರಾಜ ಹೊರಟ್ಟಿ, ಶ್ರೀಮತಿ ಲಲಿತಾ ಸಂಕೇಶ್ವರ, ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ, ಶ್ರೀಮತಿ ವಾಣಿ ಸಂಕೇಶ್ವರ ಹಾಗೂ ಸಂಸದ ಭಗವಂತ ಖೂಬಾ ಅವರು 4ನೇ ದಿನದ ಯೋಗ ಶಿಬಿರ ಉದ್ಘಾಟಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಯೋಗ ಕಾರ್ಯಕ್ರಮಕ್ಕೆ ಆಗಮಿಸಿ, ಬಾಬಾ ರಾಮದೇವ್ರೊಟ್ಟಿಗೆ ವೇದಿಕೆ ಮೇಲೆ ಯೋಗ್ಯಾಭ್ಯಾಸ ಮಾಡಿದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಅವರು ಆಗಮಿಸಿದರು. ಅವರನ್ನು ಬಾಬಾ ರಾಮ್ದೇವ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಅವರು ಸ್ವಾಮಿ ವಿವೇಕಾನಂದರ ಮೂರ್ತಿ ನೀಡಿ ಗೌರವಿಸಿದರು.
ಉಪರಾಷ್ಟ್ರಪತಿ ಎದುರಿಗೆ ಬಾಬಾ ರಾಮದೇವ್ ಅವರು ಕಾಡಾಸನ ಪ್ರದರ್ಶಿಸಿದರು. ಸ್ವಯಂ ವೆಂಕಯ್ಯನಾಯ್ಡು ಅವರು ಕೂಡ ಯೋಗಾಭ್ಯಾಸ ಮಾಡಿದರು.