

ಯಲಬುರ್ಗಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಟ್ಟಣದ ಜಾಮೀಯಾ ಮಸೀದಿ ಆವರಣದಲ್ಲಿ ಮುಸ್ಲಿಂ ಸಮಾಜ ಶುಕ್ರವಾರ ಪ್ರತಿಭಟನೆ ನಡೆಸಿತು.
ಸಮಾಜದ ಅಧ್ಯಕ್ಷ ಅಕ್ತರ್ ಸಾಬ್ ಖಾಜಿ ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು. ಇದು ಅಲ್ಪಸಂಖ್ಯಾತರಿಗೆ ಮರಣ ಶಾಸನವಾಗಲಿದೆ. ದೇಶದ ವಕ್ಫ್ ಕಾಯ್ದೆಗೆ ಶತಮಾನದ ಇತಿಹಾಸವಿದೆ, ಮುಸ್ಲಿಂ ಸಮುದಾಯದ ಬಡ ಮತ್ತು ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ ಅಲ್ಲಾಹನ ಹೆಸರಿನಲ್ಲಿ ದಾನ ಮಾಡುವ ಆಸ್ತಿಗಳೇ ವಕ್ಫ್ ಆಸ್ತಿಗಳಾಗಿವೆ. ಇವುಗಳಿಗೆ ತಿದ್ದುಪಡಿ ತರುವುದು ಸರಿಯಲ್ಲ. ಕೇಂದ್ರ ಕೂಡಲೇ ತನ್ನ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ ಹಕ್ಕುಗಳನ್ನು ಮೊಟುಕುಗೊಳಿಸುವ ಮತ್ತು ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರುವ ಅಂಶಗಳನ್ನು ಕಾಯ್ದೆಯಲ್ಲಿ ಸೇರಿಸಲಾಗಿದೆ. ವಕ್ಫ್ ಹೇಗಿರಬೇಕು ಎಂಬುವುದನ್ನು ನಿರ್ಧರಿಸುವ ಹಕ್ಕು ಮುಸ್ಲಿಂ ಧರ್ಮ ಪಂಡಿತರಿಗೆ ಮಾತ್ರ ಇದೆ. ಅದರಲ್ಲಿ ಮೂಗು ತೋರಿಸಲು ಸರ್ಕಾರಕ್ಕೆ ಅವಕಾಶವಿಲ್ಲ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರಮುಖರಾದ ಮೈಬುಸಾಬ್ ಮಕುಂದಾರ್, ಎಚ್‌ಎಚ್ ಹಿರೇಮನಿ, ಮೈನುದ್ದೀನ್ ಎಲಿಗಾರ್, ಮುನಾಫ್ ಮಕಂದರ್, ಬಾಬುಸಾಬ್ ಕುಂದಗೋಳ, ದಾದು ಎಲಿಗಾರ್, ಶಾಮಿದಸಾಬ್ ಮುಲ್ಲಾ ಇತರರಿದ್ದರು.