

ಯಲಬುರ್ಗಾ: ನೀರು ಅಮೂಲ್ಯ ಜೀವಜಲವಾಗಿದ್ದು, ಅದರ ಸಂರಕ್ಷಣೆ ಮತ್ತು ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಕಿವಿಮಾತು ಹೇಳಿದರು.
ತಾಲೂಕಿನ ಮುಧೋಳ ಗ್ರಾಮದ ಶ್ರೀ ತ್ರಿಲಿಂಗೇಶ್ವರ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಪಂ, ವಕೀಲರ ಸಂಘ ಹಾಗೂ ಗ್ರಾಪಂ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀರನ್ನು ಮಿತವಾಗಿ ಬಳಸದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿಯೇ ಯುದ್ಧ ಮಾಡುವಂಥ ಪರಿಸ್ಥಿತಿ ಎದುರಾಗಲಿದೆ. ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯ. ನೀರು ವಿಶಿಷ್ಟವಾದ ದ್ರವ, ಜೀವಜಲ. ಮನುಷ್ಯ ನೀರನ್ನು ಮಾತ್ರ ಸೇವಿಸಿ 21 ದಿನಗಳವರೆಗೂ ಬದುಕಬಲ್ಲ. ಹೀಗಿರುವಾಗ ನೀರಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ. ಅರಬ್ ದೇಶಗಳಲ್ಲಿ ಏನೆಲ್ಲಾ ಐಷಾರಾಮಿ ವಸ್ತುಗಳು ಸಿಗುತ್ತದೆ. ಆದರೆ, ನೀರನ್ನು ಮಾತ್ರ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ನಮ್ಮಲ್ಲಿ ಧಾರಾಳವಾಗಿ ದೊರೆಯುತ್ತದೆಯಾದರೂ ನೀರನ್ನು ತುಂಬಾ ಪೋಲು ಮಾಡಲಾಗುತ್ತಿದೆ. ಇದು ಹೀಗೆಯೇ ಮುಂದುವರಿದಲ್ಲಿ ಮುಂದಿನ ಪೀಳಿಗೆಗೆ ನೀರನ್ನು ಹೆಚ್ಚು ಹಣ ಕೊಟ್ಟು ಕೊಳ್ಳುವ ಸ್ಥಿತಿ ಬರಬಹುದು. ಆದ್ದರಿಂದ ನೀರನ್ನು ಮಿತವಾಗಿ ಬಳಸಿ ಎಂದರು.
ಸರ್ಕಾರಿ ಅಪರ ವಕೀಲ ಮಲ್ಲನಗೌಡ ಪಾಟೀಲ ಮಾತನಾಡಿ, ಮಾನವ ವೈಜ್ಞಾನಿಕವಾಗಿ ಚಂದ್ರಗ್ರಹ, ಮಂಗಳ ಗ್ರಹಕ್ಕೆ ಸಲೀಸಾಗಿ ಹೋಗಿಬರುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಆದರೆ ನೀರನ್ನು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ. ಇದು ದೇವರು ಕೊಟ್ಟ ಕಾಣಿಕೆ ಎಂದು ಹೇಳಿದರು.